ವಸಂತಕ್ಕೆ ಮಾಮರಗಳು ಚಂದ,
ಹೂವಿಗೆ ಸೌಗಂಧ ಚಂದ,
ಮೊಗಕ್ಕೆ ತಿಳಿನಗುವು ಚಂದ,
ಹುಣ್ಣಿಮೆಗೆ ಚಂದ್ರಮನೆ ಚಂದ,
ನನ್ನ ಜೀವನಕ್ಕಂತೂ, ಆಗೋಚರೆ,
ನಿನ್ನ ಸಾನ್ನೀಧ್ಯವೇ ಚಂದ.
ಶಿಶರನಿಗೆ ವಸಂತನ ಮೇಲಾಸೆ,
ನಿಶತನಿಗೆ ಉಷತ್ಕಾಲದ ಮೇಲಾಸೆ,
ವೈಶಾಕಕ್ಕೆ ನದಿಹಳ್ಳಗಳು ತುಂಬಿ
ಹರಿಯ ಬೇಕೆನ್ನುವಾಸೆ,
ನನಗಂತೂ, ಅಗೋಚರೆ,
ನಿನ್ನ ಕಣ್ತುಂಬ ನೋಡುವ ಮಹದಾಸೆ.
ಮಳೆಯ ಕಂಡರೆ ನವಿಲು ನಲಿಯುವುದು,
ಶಶಿಯ ಕಂಡರೆ ನೈದಿಲೆಯರಳುವುದು,
ನೇಸರ ಕಂಡರೆ ಕಮಲ ಕುಣಿಯುವುದು,
ನಿನ್ನ ಕಂಡರೆ, ಅಗೋಚರೆ,
ನನ್ನ ಹೃದಯವರಳುವುದು, ಮನಸು ಕುಣಿಯುವುದು,
ಕಲ್ಪನೆ ಕುದುರುವುದು.
ಹಾಲು ಬಾಯಾರಿಕೆಗೆ ಹಿತ,
ತಂಗಾಳಿ ಉರಿಬಿಸಿಲಿಗೆ ಹಿತ,
ಭೇಟಿ ತರುಣ ಹೃದಯಕೆ ಹಿತ,
ಬೆಂದ ಮನಕ್ಕಂತೂ ಸಾಂತ್ವನದ ಮಾತು ಹಿತ,
ನನಗೆ, ಅಗೋಚರೆ,
ನೀನು ನನ್ನವಳೆಂಬ ಭಾವ ಹಿತದ ಮೇಲಿನ ಹಿತ.
ನಯನ ವಿಹೀನ ವದನದ ಹಾಗೆ,
ಲಾವಣ್ಯವಿಲ್ಲದ ರೂಪ ಸಂಪತ್ತಿನ ಹಾಗೆ,
ಗುಣ ವಿಹೀನ ಹೆಣ್ಣಿನ ಹಾವಭಾವದ ಹಾಗೆ,
ತೃಪ್ತಿಕಾಣದ ಬಾಳಿನ ವೈಭವದ ಹಾಗೆ
ರಸಹೀನ ಕಗ್ಗತ್ತಲೀ ಬಾಳು,
ಅಗೋಚರೆ, ನೀನಿಲ್ಲದಿರುವಾಗ ನನಗೆ.
ಸೂರ್ಯೋದಯ ಪೂರ್ವ ಮರೆಯುವುದುಂಟೆ?
ಜ್ಞಾನಿ ಸತ್ಯದ ದಾರಿ ಮರೆಯುವುದುಂಟೆ?
ಹರಿಯುವ ನದಿ, ಸಾಗರ ಮರೆತು ಸಾಗುವುದುಂಟೆ?
ನಾನು, ಅಗೋಚರೆ,
ನಿನ್ನ ಮರೆತು ಬದುಕುವುದುಂಟೆ?
ಕವಿಗೆ ಕಾವ್ಯದ ಮೇಲಿನ ಮೋಹ,
ಭಕ್ತನಿಗೆ ತನ್ನಾರಾಧ್ಯ ದೇವರ ಮೋಹ,
ಶಿಲ್ಪಿಗೆ ಶಿಲ್ಪಕೌಶಲ್ಯದ ಮೋಹ,
ಕಲಾಕಾರನಿಗೆ ಕಲೆಯ ಕುಸುರಿನ ಮೋಹ,
ಅಗೋಚರೆ, ನನಗೆ,
ನಿನ್ನ ಅಗೋಚರತೆಯ ಮೋಹ.
ಸಮರಸತೆ ಸಂಗೀತವಾಗಲೇ ಬೇಕು,
ಜ್ಞಾನ ಸತ್ಯ ಸೇರಲೇ ಬೇಕು,
ಕಾವ್ಯ ಹೃದಯವೇರಲೇ ಬೇಕು,
ನದಿ ಸಮುದ್ರ ಸೇರಲೇ ಬೇಕು,
ಆಶೆ ಸಾಧನೆಯ ಸೇರಲೆಬೇಕು,
ಒಲವು ಬಾಳ ಸೇರಲೇ ಬೇಕು,
ಹಾಗೆಯೇ, ಅಗೋಚರೆ,
ನಾನು ನಿನ್ನ ಸೇರಲೇ ಬೇಕು.
ಮಂದಿರಕೆ ಗೋಪುರ ಬೇಕು,
ಸಾಹಿತ್ಯಕ್ಕೆ ತತ್ತ್ವಮೀಮಾಂಸೆ ಬೇಕು,
ಗ್ರಹಭ್ರಮಣೆಗೆ ಸೂರ್ಯ ಕೇಂದ್ರವಾಗಿರಬೇಕು,
ನನ್ನೀ ಜೀವನಕೆ ನೀನು, ಅಗೋಚರೆ,
ಜ್ಞಾನದರ್ಶನವಾಗಿರ ಬೇಕು,
ಶರೀರಕ್ಕೆ ಹೃದಯವೇ ಮೂಲ,
ಗರ್ಭಗುಡಿಯಲ್ಲಿ ದೇವಮೂರ್ತಿಯೇ ಮೂಲ,
ದಾಂಪತ್ಯಕ್ಕೆ ಸಮರಸವೇ ಮೂಲ,
ಕಾವ್ಯಾರ್ಥಕ್ಕಂತೂ ನವರಸಗಳೇ ಮೂಲ,
ಹೀಗಿರುವಾಗ, ನನ್ನ ಬಾಳಿಗೆ ನಿನ್ನೊಡನಾಟಗಳೇ ಮೂಲ
ಓ ನನ್ನ ಅಗೋಚರೆ.
ನಾನು ಬರೆ ಅಕ್ಷರಗಳ ಪುಂಜ, ನೀನದರ ಅರ್ಥ ಮಾಧುರ್ಯ,
ನಾನು ಶಬ್ದಾರ್ಥ ವಾಕ್ಯ ಸಂಕಲನ,
ನೀನು ಭಾವ ಸಮ್ಮಿಳನ, ಕಾವ್ಯಾರ್ಥ ಸ್ಫುರಣ,
ಶಬ್ದ ಗದ್ದಲ ನಾನು, ಗಹನ ಸಂಗೀತ ನೀನು,
ಕೆತ್ತನೆಯ ಏರಿಳಿತದ ವೈವಿಧ್ಯ ನಾನು,
ಅದರಿಂದ ಚಿಮ್ಮುವ ಹಾವಭಾವ ಜೀವಂತಿಕೆ ನೀನು,
ನಾನು ಮೇಲಿನ ಚಿಪ್ಪು, ನೀನೊಳಗಿರುವ ಅಮೂಲ್ಯ ಮುತ್ತು,
ತಲತಲಾಂತರ ಸಂಪ್ರದಾಯ ನಾನು,
ಅದರಿಂದೊಡಮೂಡುವ ಪರಂಪರೆ, ಸುಸಂಸ್ಕøತಿ ನೀನು,
ಒಟ್ಟಾರೆ, ಅಗೋಚರೆ,
ದೇಹ ನಾನು, ಅದರಾತ್ಮ ಅಂತರಾಳ ನೀನು.
ನೀರಿಗೆ ಹರಿಯುತ್ತಿರಬೇಕು,
ತಂಗಾಳಿಗೆ ತೀಡುತ್ತಿರಬೇಕು,
ಮಲ್ಲಿಗೆಗೆ ಸುಸ್ವಾದ ಚೆಲ್ಲುತ್ತಿರಬೇಕು,
ಬಳ್ಳಿಗೆ ಬಳಸಿ ಹಿಡಿಯುತ್ತಿರಬೇಕು,
ಕಾರಂಜಿಗೆ ಮೇಲೆ ಪುಟಿಯುತ್ತಿರಬೇಕು,
ನನಗೋ, ಅಗೋಚರೆ,
ನೀನುಲಿವ ಸಂಗೀತ ಕೇಳುತ್ತಿರಬೇಕು.
This poem has not been translated into any other language yet.
I would like to translate this poem