ಅಮೂರ್ತ ಸಂಬಂಧ Poem by PRAVEEN KUMAR Kannada Songs

ಅಮೂರ್ತ ಸಂಬಂಧ

ಅವಳೊಬ್ಬಳಿದ್ದರೆ ಜೊತೆ ಸಾವಿರ ಆನೆಯ ಬಲ ನನಗೆ,
ಅವಳಿಲ್ಲವಾದರೆ ನಾನು ಬರೆ ಜೀವಚ್ಛವ, ನಿಶ್ಶಕ್ತ, ವಿರಕ್ತ;
ನನ್ನ ಬದುಕಿನ ಕಾರ್ಗತ್ತಲಲಿ ಬೆಳ್ಳಬೆಳದಿಂಗಳು ಅವಳು,
ನನ್ನ ಜೀವದ ಬಾನಿನಲಿ ಅವಳು ಪ್ರಖರ ಪ್ರಜ್ವಲ ರವಿ;
ನನ್ನ ಕಂದೀಲು, ಹೃದಯದ ದೀಪ, ದಾರಿಯ ದಿಕ್ಸೂಚಿ,
ನನ್ನ ಕಣ್ಣಿನ ಕಾಂತಿ, ಆತ್ಮದ ಚೈತನ್ಯ, ಆಂತರ್ಯದ ಸತ್ತ್ವ;
ನನ್ನಸ್ಥಿತ್ವದ ತಳ, ನನಗವಳು ಕಾಲಸ್ಥಳಗಳ ಮೀರಿದ ತತ್ತ್ವ,
ಬಾಳಿನ ಒಳಾರ್ಥ, ಗುರಿ, ಅವಳು ನನ್ನ ಮೂಲದ ಪ್ರಜ್ಞೆ.

ನಮ್ಮಿಬ್ಬರ ನಡುವೆ ವಿಶ್ವಾಂತರಗಳ ಬಲು ಧೀರ್ಘ ದೂರ;
ಈ ದೂರಾಂತರದಲೂ ನಾನವಳ ಅಂಗೈಹಾಗೆ ಕಾಣಬಲ್ಲೆ,
ಅವಳ ನಗು, ಅಳು, ಏರಿಳಿತ, ಪ್ರತಿ ಪಿಸುಮಾತ ಕೇಳಬಲ್ಲೆ;
ಏನೋ ತಿಳಿಯದಜ್ಞಾತ ಅಲೆಗಳ ಜಾಲ ನಮ್ಮ ಕೂಡಿಟ್ಟು
ಅವಳ ನನ್ನನ್ನಮೂರ್ತ ಬಂಧ ಸಂಬಂಧದಲಿ ಬಿಗಿಬಿಗಿದು
ನಮ್ಮನ್ನನವರತ ಜೊತೆ ಜೊತೆಯಲ್ಲಿ ಸಾಗಿಸುತ್ತಿದೆ ಮುಂದೆ.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success