ನಿನ್ನ ಪರಿ ಕಂಡಾಗ ನನ್ನಾಂತರ್ಯ ಮರುಗುವುದು
ನಿನ್ನೊದ್ದಾಡವ ಕಂಡು ನಾನೊಳಗೊಳಗೆ ಕೊರಗುವೆನು;
ಎಲ್ಲ ಅಡೆತಡೆಗಳ ತೊಡೆದು ನಿನ್ನ ಬಳಿ ಬರಬೇಕೆಂದಾಸೆ,
ತೆಕ್ಕೆಯೊಳಗಿಟ್ಟು ನಿನ್ನನ್ನು ರಮಿಸಿ ಕಣ್ಣೀರೊರೆಸುವಾಸೆ;
ಘೋರತಪಸ್ಸಲ್ಲಿರುವ ಪಾರ್ವತಿಗೆ ವಸಂತಋತುವಿನ ಗಣನೆಯೆ?
ಕೃಷ್ಣಕಾತುರ ಪೀಡಿತ ರಾಧೆಗೆ ಬರೆ ಮುರಲಿಗಾನದಿ ತೃಪ್ತಿಯೆ?
ಆಕಾಶಕೆ ಬಿಸುಟ ಆಟಿಕೆಗಳಂತೆ ನನ್ನೊಂದೊಂದಾಸೆ
ಕೈಲಾಗದೆ ಮರಳಿ ದೊಪ್ಪನೆ ನೆಲಕ್ಕುರುಳುವುದು,
ನನ್ನ ನಿಶ್ಶಕ್ತತೆಯ ಮತ್ತೆ ಮತ್ತೆ ತೆರೆದು ತೋರುವುದು;
ನಿನ್ನ ತಪಸ್ಸಿನ ಬಿಗಿಬೇಗೆಯಲಿ ಜೀವಂತ ಸುಡುತ್ತಿರುವ ನಾನು
ನಿನ್ನ ತಲಪುವ ಹಾಗಿಲ್ಲ, ಕೈಚೆಲ್ಲಿ ದೂರ ಓಡುವ ಹಾಗಿಲ್ಲ;
ಘೋರತಪಸ್ಸಲ್ಲಿರುವ ನೀನು ಕಣ್ಣುತೆರೆದು ನನ್ನ ನೋಡುವುದಿಲ್ಲ,
ನಾನೆ ಬಂದೆನೆಂದರೂ ನಿನ್ನ ತಪದ ಬೇಗೆ ನಂದುವುದಿಲ್ಲ;
ನಿನ್ನನ್ನೆ ಸುಡುಸುಡುವ ಈ ತಪಸ್ಸು ಮುಗಿಯುವ ಬಗೆ ಹೇಗೆ?
ತಪಸ್ಸಿನ ತಂಪು, ಸುಖ, ಶಾಂತಿ ನಮ್ಮ ಬೆಸೆಯುವುದು ಹೇಗೆ?
ಹಿಮಾಲಯದೆತ್ತರದ ಬೇಲಿಗಳ ನನ್ನೆದುರು ನಿರ್ಮಿಸಿ ನೀನು,
ನನ್ನೊಳಗಿನ ಹೊರಗಿನ ಕಣ್ಣಲ್ಲಿ ಕಡು ಕತ್ತಲೆಯನು ಕಟ್ಟಿ,
ಮುನ್ನಡೆಯ ಹಾದಿಯಲಿ ಮಬ್ಬು ತುಂಬಿ ದಿಗ್ಭ್ರಾಂತಗೊಳಿಸುವೆ;
ಹಿಂದಿರುಗುವ ಹಾಗಿಲ್ಲ, ಮುನ್ನಡಿುಡುವ ಹಾಗಿಲ್ಲ ನಾನು,
ಇದ್ದಲ್ಲೆ ನಿಂತು, ಕಾಲಕೂಪದಲಿ ಹೂತು ಘನೀಕೃತವಾಗಲೆ?
ನಾವು ಹಚ್ಚಿದ ದೀಪ ನಂದದೆ, ನಮ್ಮ ಬೆಸೆದಿನ್ನೂ ಬೆಳಗುತ್ತಿದೆ,
ನಿನ್ನೊಂದೊಂದು ತ್ಯಾಗದಾಹುತಿಯಿಂದ ಮತ್ತೆ ಪ್ರಜ್ವಲಿಸುತ್ತಿದೆ,
ನೀನಾದರೋ, ದೀಪದ ಬತ್ತಿಯಾಗುರಿದು ಬೆಳಕು ಚೆಲ್ಲುತ್ತಿರುವೆ;
ನನಗಾದರೋ, ಈ ಬೆಳಕೂ ಬೇಡ, ನೀನುರಿದು ನಂದುವುದೂ ಬೇಡ,
ಮತ್ತೆ ನಲಿನಲಿವ ಮೊಲ್ಲೆಯಾಗಿ ನೀನು ಮೆರೆಯಬೇಕು, ಮೊರೆಯಬೇಕು,
ದೂರದಿಂದಲೆ ನಿನ್ನ ಝೇಂಕಾರ ಕಂಡು, ನನ್ನ ಕಣ್ಣು ತುಂಬಬೇಕು;
ನನ್ನನ್ನಾಹುತಿಗೊಳುವ ಘೋರತಪಸ್ಸು ನಿನ್ನಾವ ಪುರುಷಾರ್ಥಕ್ಕೆ?
ನನ್ನಾತ್ಮವ ಹರಿಹಂಚಾಗಿಸುವ ಈ ತ್ಯಾಗ ಮುಂದುವರಿಯಬೇಕೆ?
ಕಣ್ಣು ತೆರೆದು, ಸ್ಥಿತಿಯರಿತು ನೀನು ಹಿಂದೆ ಬಾ ಓ ತಪಸ್ವಿನಿಯೆ,
ನಾವೊಂದಾಗಿ ನಮ್ಮ ನಂದಾದೀಪ ಮತ್ತೆ ಬೆಳಗುವುದು ಸಾಧ್ಯ.
ಬಾಳೆನ್ನುವುದು ಮಲ್ಲಿಗೆ ಮೊಲ್ಲೆಮೊಗ್ಗು, ಸುಡುಸುಡುವ ಬೆಂಕಿಯಲ್ಲ,
ತಗ್ಗಿಬಗ್ಗಿ, ಮರೆತು ಬೆರೆತು, ಲಾಲನೆ ಪಾಲನೆ ತೋರಿಸಬಲ್ಲ ಸೊತ್ತು,
ಬಾಳು ಆತ್ಮಾಹುತಿಯನೊಲ್ಲದು, ತಪಸ್ಸಿನ ಘೋರತೆಗೆ ಕರಟುವುದು;
ನಿರ್ದಯ ಪೆಟ್ಟನುಂಡುಂಡು ನೀನು ಕಲ್ಲಾಗಿರುವುದನು ಬಲ್ಲೆ,
ನನಗಿನ್ನೇನಿಲ್ಲವೆಂದು ವೈರಾಗ್ಯದಲಿ ಬೆಂದಿರುವುದನು ಬಲ್ಲೆ;
ಕಲ್ಲಾಗಿ ಚಚ್ಚಿದ ಲೋಕವನು ನೀನು ಕಲ್ಲಾಗಿ ಚಚ್ಚಿದರೆ
ಒಡೆದು ಚೂರಾಗುವವರು ನೀನು ನಾನು ಮಾತ್ರ;
ಕಾಲ ಮಿಂಚಿಲ್ಲ, ನಾವು ಹಚ್ಚಿದ ದೀಪ ನಂದುವಂತಹದಲ್ಲ,
ಮಡುಕಟ್ಟಿದ ನೋವಿನ ಮಧ್ಯೆ ಸಿಡಿದೆದ್ದು ನೀನು ಬಂದರೆ
ಹೊಸ ದಾರಿ, ಹೊಸ ಲೋಕ ನಾವು ಕಟ್ಟುವುದು ಸಾಧ್ಯ;
ವಿಧಿಯೊದೆತ ತಿಂದು, ಮೇಲೆ ನಿನ್ನ ನೀ ರೀತಿ ದಂಡಿಸಬೇಕೆ?
ಬಾಳ ಹುಣ್ಣನ್ನು ಈ ರೀತಿ ಚಿವುಟಿ ಹಿಂಸಿಸುವುದು ಸರಿಯೆ?
ಕಣ್ಣು ತೆರೆದು ತಿರುಗಿ ನೋಡು ನಿನ್ನ ಸುತ್ತಲಿನ ಸಿಹಿ ಲೋಕ,
ಬಾಚಿದಷ್ಟು ತುಂಬಿ ನಿಲುವ ಸಮೃಧ್ದಿಯ ಸುಖ ಹರವು
ನಿನ್ನ ಪಾದತಳದಲ್ಲಡರಿ ನಿನ್ನ ಕರೆಯನು ಕಾದು ನಿಂತಿದೆ ನೋಡು.
ಲೋಕಕ್ಕೆ ಹಿಮ್ಮುಖವಾಗಿ ಅದೆಷ್ಟು ಕಾಲ ಬದುಕಲು ಸಾಧ್ಯ?
ಸ್ವದಂಡನೆುಂದ ಯಾವ ಪುರುಷಾರ್ಥ ಸಾಧನೆಯು ಸಾಧ್ಯ?
ರೆಕ್ಕೆಗಳ ಬಿಚ್ಚಿ, ಬಡಿದು, ಮೇಲೇರುವವರಿಗೆ ಮಾತ್ರ ಈ ಲೋಕ
ಈ ರೀತಿ ಹೂತು ಹೂತು ನೆಲದಲ್ಲಿ ಹುದುಗಿದರೆ ಯಾವ ಸಾರ್ಥಕ್ಯ?
ಕೈತಪ್ಪುವುದು, ಮತ್ತೆಲ್ಲಿಂದಲೋ ತಿರುಗಿ ಬಂದು ಮೈಯಪ್ಪುವುದು -
ಇದು ಲೋಕ ನಿಯಮ, ಸ್ಠೃಕರ್ತನ ಗೂಢ ಮೋಜಿನಾಟ;
ಧೃತಿಗೆಡದಿರು ಚೆನ್ನೆ, ನೀನೆಲ್ಲ ತಂತುಗಳ ಕಡಿದ ಮೇಲೂ
ನಾನು ನಾನಾಗಿಯೆ ನಿನ್ನ ಬೆಂಬಿಡದೆ ಬರುವುದನು ನೀನು ಬಲ್ಲೆ;
ಏನೂ ಕಳೆದಿಲ್ಲ, ಕೆಲವು ತಿರುವು ಮೊಳೆಗಳು ಕಳಚಿವೆ, ಸತ್ಯ,
ಕೆಲವು ತಿರುವು ಸ್ಥಿತ್ಯಂತರಗಳು ನಮ್ಮ ಕಂಗೆಡಿಸಿವೆ, ಸತ್ಯ;
ನೀನು ನಾನು ಕೂಡಿ ಕಳಚಿದ ಕೊಂಡಿಗಳ ಕೂಡಿ ಹೊಸೆದು,
ಇನ್ನಿಲ್ಲದ ಹೊಸ ಸ್ಠೃ ನಿರ್ಮಿಸುವುದು ನಿರ್ವಾತ ಕನಸಲ್ಲ;
ಬಾ ಮನದನ್ನೆ, ಹರಿದ ನಿನ್ನಾಂತರ್ಯವನು ಕೂಡಿ ಹೊಲಿದು
ಹೊಸ ಸ್ವಪ್ನದ ಹೊಸ ಲೋಕಕ್ಕೆ ಅಡಿಪಾಯ ಹಾಕುವುದಕೆ ಬಾ,
ನೀನು ನಾನು ಕೂಡಿ ನಮ್ಮ ಸ್ವಪ್ನದ ಸೌಧ ನಿಜಗೊಳಿಸುವುದಕೆ ಬಾ.
This poem has not been translated into any other language yet.
I would like to translate this poem