ಜನ್ಮ ಜನ್ಮದ ವಿರಹ Poem by PRAVEEN KUMAR Kannada Songs

ಜನ್ಮ ಜನ್ಮದ ವಿರಹ

ಅವನು ಅವಳು ಪ್ರೇಮಿಗಳು,
ವಟು ಒಬ್ಬನ ಸೇವೆಯಲ್ಲಿ
ಜೊತೆಯಾಗಿ ಬದುಕಿದವರು;
ಅವರ ಗಾಢ ಪ್ರೇಮಕಂಡು
ವಟು ಒಳಗೆ ಕರುಬಿದನು:
ಪ್ರೇಮಿಗಳು ದೂರವಾಗಿ
ಜನ್ಮ ಜನ್ಮ ವಿರಹದಿಂದ
ಮತ್ತೆ ಮತ್ತೆ ಕೊರಗಬೇಕು
ಎಂದು ಅವರ ಶಪಿಸಿದನು.

1969ರ ಅಕ್ಟೋಬರ್ 29ರಲ್ಲಿ

ತಮ್ಮ ಹೊಸತು ಜನ್ಮದಲ್ಲಿ
ಇಪ್ಪತ್ತರ ವಯಸ್ಸಿನಲ್ಲಿ
ಕರಾವಳಿಯ ನಗರದಲ್ಲಿ
ಪ್ರೇಮಿಗಳು ಕೂಡಿದರು;
ಮದುವೆಯಾದ ಹೆಣ್ಣು ಅವಳು,
ಪುಟ್ಟ ಮಕ್ಕಳ ಯುವತಿ ತಾಯಿ,
ಮೊದಲ ಅವರ ಭೇಟಿಯಲ್ಲೆ
ಹೃದಯ ತುಂಬಿ ಅವನ ಮೆಚ್ಚಿ
ತನ್ನ ಪ್ರೀತಿ ನೀಡಿದಳು;
ಅವಳ ಗಾಢ ಪ್ರೀತಿ ಕಂಡು,
ಸ್ವಾರ್ಥರಹಿತ ಒಲವನುಂಡು,
ತನ್ನ ಮೊದಲ ಪ್ರೀತಿಯನ್ನು
ಅವನು ಅವಳಿಗೆ ಸುರಿಸಿದ;
ಅವನ ಸ್ಪಂದನ ರೀತಿ ಕಂಡು,
ತನ್ನ ಕೌಟುಂಬಿಕ ಕೋಟೆಯಿಂದ
ದಾರಿ ಮುಂದಕೆ ತಿಳಿಯದಾಗಿ,
ಹೆದರಿದಂತ ಹರಿಣಿಯಾಗಿ
ತರುಣಿ ದೂರ ಸರಿದಳು;
ಒಳಗಿನಾಶೆ ಅದುಮಿಯಿಟ್ಟು,
ದೂರ ದೂರವಿರಬೇಕೆಂದು,
ಸೋತು, ಗೆದ್ದು, ಗೆದ್ದು, ಸೋತು,
ತನ್ನೊಡನೇ ಯುದ್ಧವ ಗೈದಳು;
ಅಸ್ತವ್ಯಸ್ತ ಬಟ್ಟೆಯುಟ್ಟು,
ಅವನ ಮುಂದೆ ಸುಳಿದು ನಿಂತು,
ಪ್ರೀತಿ ತಂತು ಕಡಿಯುವಂತೆ,
ಅವನು ದೂರ ಸರಿಯುವಂತೆ
ಶತ ಪ್ರಯತ್ನ ಗೈದಳು;
ಅವಳ ಬದಲು ರೀತಿ ಕಂಡು,
ಏನನೊಂದೂ ತಿಳಿಯದಾಗಿ,
ನೋವಿನಿಂದ ಅವ ಹಳಹಳಿಸಿದ.

1970ರ ಮಾರ್ಚ್ 29ರಲ್ಲಿ

ಸಹಜ ಕಾಲ ಬದಲುಗೊಂಡು,
ಕಾಲ ನಿಯಮ ವಿಧಿಸಿದಾಗ,
ತುಂಬಿ ಬಂದ ಕಣ್ಣನ್ನೊರೆಸಿ,
ಅವರು ದೂರ ವಾದರು.

1970ರ ಜೂನ್ 29ರಲ್ಲಿ

ಕೆಲವೆ ಕಾಲದೊಳಗೆ ಅವಳು
ತನ್ನ ತಾನೇ ಸುಟ್ಟುಕೊಂಡು,
ಅವನು ಹುಟ್ಟಿದ ಮಾಸ ದಿನದಲೆ
ದೂರವೆಲ್ಲೋ ಸರಿದಳು.

ವಿಷಯ ತಿಳಿದು ಕಂಗೆಟ್ಟ ಅವನು,
ಜೀವ ಜೀವನ ಮೋಹ ತೊರೆದು,
ಬದುಕು ತನಗಸಂಬದ್ಧವೆಂದು,
ನಿದ್ರೆ ಗುಳಿಗೆ ತುಂಬ ತಿಂದು,
ಅವಳ ಬೆನ್ನಲೆ ನಡೆಯಲು,
ವಿಧಿಯ ಆಟ ಮಧ್ಯೆ ಬಂದು,
ವೈದ್ಯಾರೈಕೆ ಯತ್ನದಿಂದ
ಮತ್ತೆ ಬದುಕಿಗೆ ಬಂದನು.

ಬದುಕನೆಲ್ಲ ಅವಳಿಗಿಟ್ಟು,
ಅವಳ ನೆನಪು ಕಣ್ಣೀರಿನಲ್ಲೆ
ವರ್ಷವರ್ಷ ನೂಕಿದ;
ತನ್ನವಳು ಅವಳು ತನಗೆ ಎಂದು,
ಎಳೆಯ ಪ್ರಾಯದ ಯುವತಿಯಾಗಿ,
ಹೊಸತು ಒಂದು ಜನ್ಮ ತಾಳಿ,
ತನ್ನ ಕೂಡುವ ನಿರ್ಧಾರದಲ್ಲಿ
ತನ್ನ ಜೀವನ ಕಳೆದಳೆಂದು
ನಂಬಿ ನಂಬಿ ಬದುಕಿದ;
ಅವಳು ಹೊಸತು ಜನ್ಮದಲ್ಲಿ
ಬೆಳೆಯುವುದರ ಲೆಕ್ಕವಿರಿಸಿ,
ತನ್ನ ಅವಳ ಭೇಟಿಗಾಗಿ,
ದಿನ ವರ್ಷ ಗುಣಿಸಿದ.

ಹಲವು ವರ್ಷ ಕಳೆದ ಹಾಗೆ,
ಭೇಟಿ ಸಮಯದ ಮಿತಿಯು ಮೀರಲು,
ಎಲ್ಲೋ ಏನೋ ದಿಗಂತದಾಚೆ,
ಆಕಾಶ ಗಂಗೆ ಮಧ್ಯದಲ್ಲಿ
ತನ್ನವಳು ದಾರಿ ಮರೆತಳೆಂದು,
ದುಃಖದಲ್ಲೆ ದಿನ ನೂಕಿದ.

2004ರ ಮಾರ್ಚ್ 29ರಲ್ಲಿ

ಮತ್ತಾವುದೋ ಒಂದು ನಗರದಲ್ಲಿ,
ಮೂರು ದಶಕದ ನಾಲಕ್ಕು
ವರುಷಗಳಾಂತರದ ಹಿಂದೆ
ಅವಳು ಅವನು ಬೇರ್ಪಟ್ಟ ದಿನವೆ
ಅವನು ಅವಳು ಕೂಡಿದರು;
ಮೂವತ್ತು ವರುಷ ಹಿರಿಯ ಅವನು,
ಮದುವೆ, ಮೇಲೆ ಮಗನು ಒಬ್ಬ,
ಐವತ್ತೈದರ ಹಿರಿಯ ಜೀವ;
ಅವಳೋ, ಇಪ್ಪತ್ತೈದರಲ್ಲಿ,
ಆಗ ತಾನೇ ಅರಳುವವಳು,
ದೇವ ಲೋಕದ ಸುಂದರಿ,
ನಯ ವಿನಯದ ದಂತ ಶಿಲ್ಪ,
ಮೊದಲ ದಿನದ ಮೊದಲ ಕ್ಷಣವೆ
ತನ್ನಾತ್ಮ ಹೃದಯವನಿತ್ತಳು;
ಅವಳ ಭಾವ ಪ್ರೀತಿ ಕಂಡು,
ಅವಳ ಪ್ರಿಯ ನಡತೆಯುಂಡು,
ಕಾಲ ಮುಂದೆ ಕ್ರಮಿಸಿದಂತೆ,
ಅವನು ಅವಳಿಗೆ ಸೋತನು,
ತನ್ನನ್ನವಳಿಗೆ ಇತ್ತನು;
ತನ್ನ ಈ ಪರಿಕ್ರಮಣದಿಂದ
ಅವನ ಮದುವೆ ಮುರಿಯದಂತೆ,
ಅವನ ಬಾಳು ಒಡೆಯದಂತೆ,
ಅವಳೆ ದೂರ ಸರಿದಳು;
ತನ್ನ ಪ್ರೀತಿ ಪಾವಿತ್ರ್ಯಕ್ಕೆಂದು,
ತಾನೆಂದೂ ಮದುವೆಯಾಗೆನೆಂದು,
ಅವನ ದಿನ ಕ್ಷಣ ಸ್ಮರಣೆಯಲ್ಲೆ
ತಪಸ್ವಿಯಾಗಿ ಉಳಿದಳು.

ವಟುವು ಕೊಟ್ಟ ಶಾಪ ಮುಂದೆ
ಎಷ್ಟು ಕಾಲ ಇರುವುದೆಂದು
ಅವನು ಅವಳು ತಿಳಿಯರು;
ಜನ್ಮ ಜನ್ಮದ ವಿರಹದಿಂದ,
ಕ್ಷಣ ಕ್ಷಣದ ನೋವಿನಿಂದ,
ಅವನು ಅವಳು ಎಷ್ಟು ಕಾಲ
ನಡೆಯಬೇಕೋ ತಿಳಿಯದು.

Wednesday, April 27, 2016
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success