ಕವನ ಹೇಗಿರಬೇಕು? Poem by Praveen Kumar in Bhavana

ಕವನ ಹೇಗಿರಬೇಕು?

ಕವನ ಹೇಗಿರಬೇಕು?
ಕವನ ಹವನ ಮಾಡಿದಂತಿರಬೇಕು,
ಹವಿಸ್ಸುಗಳು ಹೋಮಕುಂಡಕ್ಕೆ ಬಿದ್ದು,
ಅಮೂರ್ತಧೂಮವಾಗಿ ಆಕಾಶಕ್ಕೇರಬೇಕು,
ಹೊಸ, ಹೊಸ ಬಣ್ಣ ಚಿತ್ತಾರಗಳ ಕೊಟ್ಟು,
ಕಂಡವರ ಕಲ್ಪನೆಯ ಕೆರಳಿಸುವಂತಿರಬೇಕು,
ಪರಿಸರದಲ್ಲಿ ಪ್ರಜ್ಞೆ ಉದ್ದೀಪನಗೊಳಿಸಿ,
ಹೊಸ ಭಾವಾರ್ಥ ಸೃಷ್ಠಿ ವೃಷ್ಠಿ ಹರಿಸಬೇಕು;
ಒಳಗೆ ಹರಡಿರುವ ಜೇಡರ ಬಲೆಗಳ ಹರಿದು,
ಹೊಸಗಾಳಿ, ಬೆಳಕು, ತೃಪ್ತಸ್ಥಿತಿ ತಂದುಕೊಡಬೇಕು;
ಹೀಗಿರಬೇಕು ಕವನ,
ಇದು ಆತ್ಮದಂತರಾಳದ ಹವನ.

ಕವನ ಹೇಗಿರಬೇಕು?
ಕವನ ಯವ್ವನದ ಆವರ್ತದಂತಿರಬೇಕು;
ಮಡುವಿನ ನಡುವಿನಲಿ ಬಿದ್ದ ಭಾವಧ್ಯಾನ,
ಸುಳಿಸುಳಿಯಾಗಿ, ಸುತ್ತಿ, ಹಬ್ಬಿ ಹರಿಯಬೇಕು;
ಹೊಸ ರೋಷ, ಹೊಸ ದೃಷ್ಠಿ, ಒಳಗೊಳಗೆ ಮೂಡಿಸಬೇಕು;
ಒಳಗೆ ಹುಳಿಸಿ, ಹೊರಗೆ ದಬ್ಬಿ ಸ್ಫುರಿಸಬೇಕು;
ಹೊಸ ಚೇತನ, ಹೊಸ ಸ್ಫಂದನ, ಹೊಸಾಸ್ವಾದನೆ ಕೂಡಿ,
ಒರಟು ಲೋಕದ ಮಧ್ಯೆ, ಬಣ್ಣಮಯ ಲೋಕ ಮೂಡಿತರಬೇಕು;
ಇಹಪರ ಭವಿಷ್ಯತ್ತನ್ನು ಕೂಡಿಸಿ ಮುಂದಿಟ್ಟು,
ನಿಂತಲ್ಲಿ ನಿಲ್ಲಲು ಬಿಡದೆ, ಪೀಡಿಸಿ ಮುಂದೊತ್ತಬೇಕು;
ಹೀಗಿರಬೇಕು ಕವನ,
ಕವನ, ಯವ್ವನದಂತರಾಳದ ಧ್ಯಾನ.

ಕವನ ಹೇಗಿರಬೇಕು?
ಕವನ ಲವಣದ ರುಚಿಯಂತಿರಬೇಕು;
ಸಪ್ಪೆ ಜೀವನಕ್ಕೆ ತರತರ ರುಚಿ ಕೊಟ್ಟು,
ಅನುಭವಿಸಿದಕ್ಕೆಲ್ಲ ಹೊಸರೂಪ ಕೊಡಬೇಕು;
ಎದುರಾದದಕ್ಕೆಲ್ಲ, ಹೊಸಾರ್ಥ, ಮನೋಹರತೆ ಕೊಟ್ಟು,
ಮತ್ತೆ ಮತ್ತೆ ಬೇಕೆನಿಸುವ ಬಯಕೆ ತಂದೀಯಬೇಕು;
ಕವನ, ದ್ಠೃಕೋನ ಬದಲಿಸಬೇಕು,
ಕಣ್ಣಿಗೆ ಕಾಣದ ಹೊಸತನ ಸ್ಠೃಸಬೇಕು;
ನೆಲದ ಮೇಲಿದ್ದವರನ್ನು ಮೇಲೆ ಮೇಲೆತ್ತಿ ಕುಣಿಸಿ,
ಬದುಕು ಸಂಭ್ರಮವನ್ನು ಬಿಚ್ಚಿ ತೋರಿಸಬೇಕು;
ಹೀಗಿರಬೇಕು ಕವನ,
ಕವನ ಬೇಸತ್ತ ಹೃದಯಕ್ಕೆ ಭಾವಪೂರ್ಣ ಲವಣ.

Friday, April 29, 2016
Topic(s) of this poem: poems
COMMENTS OF THE POEM
READ THIS POEM IN OTHER LANGUAGES
Close
Error Success