ನಿನ್ನ ಕುಸುರಿನ ಕೆಲಸ Poem by Praveen Kumar in Bhavana

ನಿನ್ನ ಕುಸುರಿನ ಕೆಲಸ

ಈ ಮನೋಹರ ಲೋಕವು, ನಿನ್ನ ಕುಸುರಿನ ಕುಶಲ ಕೆಲಸ,
ನಿನ್ನ ಸಿದ್ಧಿ, ಶಕ್ತಿಗಳತ್ಯುನ್ನತ ಪರಿಪೂರ್ಣ ಪರಿಪಾಕ;
ನಿನ್ನನ್ನೆ ತುಂಬಿ, ನೀ ಸಿದ್ಧಗೊಳಿಸಿದ, ನಿನ್ನ ಪ್ರತಿಬಿಂಬ;
ನೀನೋ ಅಚ್ಯುತ, ಅಸ್ಖ್ನಲಿತ, ದೋಷರಹಿತ, ಪರಿಪೂರ್ಣ,
ಸುಂದರ, ಕರುಣಾ ಸಾಗರ, ಪ್ರಜ್ಞೆ, ವಿವೇಕ, ಜ್ಞಾನ, ಸಾಕ್ಷಾತ್ಕಾರ;
ಮತ್ತೇಕೆ ನಿನ್ನ ಸೃಷ್ಠಿಯಲಿ, ಲೋಪ ದೋಷ, ನೋವು, ಪೀಡೆ, ನರಳಾಟ,
ಅನ್ಯಾಯ, ಕುರೂಪ, ಬೀಭತ್ಸ್ಸತೆ, ಭೀತಿ, ಕ್ರೌರ್ಯ, ಹೋರಾಟ, ಜಂಜಾಟ?
ಇದೇಕೆ ನಿನ್ನ ಪ್ರತಿಬಿಂಬದಲಿ, ಕರುಳು ಕೊಯ್ಯುವ ದಾರುಣ ರೂಪ,
ಇದಾವ ಕಾಲದ, ಯಾವ ರಷಿವರೇಣ್ಯರ ಹೃದಯದಾಳದ ಶಾಪ?

ನಿಷ್ಕಪಟ ಹೃದಯದ, ಹಾಲುಹಸುಳೆಗಳ, ಯಾವ ತಪ್ಪಿಗೆಂದು,
ಹಸಿವು, ಕ್ರೌರ್ಯಗಳ ಅಷಾತಕ್ಕೀಡುಮಾಡಿ, ಭೂಮಿಗಿಳಿದು ತರುವೆ?
ಪ್ರೀತಿಯೊಂದನು ಬಿಟ್ಟು, ಮತ್ತೇನನ್ನರಿಯದ ಇಳಿ ಬಾಲೆಯರ ಭೂಮಿಗಿಳಿಸಿದ ಮೇಲೆ,
ಸುಂದರ ಕನಸುಗಳನೊಡೆದು ನೋಡುವ ಕ್ರೌರ್ಯ, ನಿನಗೆ ಚೆಲುವೆ?
ದುಷ್ಠ ವ್ಯೂಹದಲಿ, ನಿನ್ನ ಕರುಳುಬಳ್ಳಿಗಳನಿಟ್ಟು, ನೀನೀಪರಿ ನಗುವುದು ತರವೆ?
ನೋವು, ಕಣ್ಣೀರು, ದಮನೀಯ ದು: ಖ, ನಿನ್ನೀ ಸುಂದರ ಸೃಷ್ಠಿಯಲ್ಲೇಕೆ?
ಹಸಿವು, ಅನ್ನಬಟ್ಟೆಗೆ ಕಾದಾಟ, ದೌರ್ಜನ್ಯವೂ, ನಿನಗೆ ಸೌಂಧರ್ಯ ಸಾಧನವೆ?
ಬೆಟ್ಟದಾಶೆಗಳೆದುರಿಟ್ಟು, ನಿರಾಶೆಯ ನರಕಕೇಕೆ ದಬ್ಬಿ ಬಿಡುವೆ?
ನೀನೆ ಸೃಷ್ಠಿಸಿದ ಮೆತ್ತನ್ನ ಮನಸುಗಳನ್ನು ಕತ್ತರಿಸುವುದು ಸರಿಯೆ?

ಎಲ್ಲೋ ಏನೋ ತಪ್ಪಿದೆ ದೇವ, ನಿನ್ನ, ನಿನ್ನೀ ಲೋಕದ ಮಧ್ಯೆ,
ಅಥವ, ನಿನ್ನ ನಿನ್ನೀ ಲೋಕವನರಿವ ನಮ್ಮ ಗ್ರಹಣ ಕಲ್ಪನೆಯಲ್ಲೆ?
ಸುಖ ದು: ಖದ ದ್ವಂದ್ವ, ಚೆಲುವು ಬೀಭತ್ಸ, ನ್ಯಾಯನ್ಯಾಯದ ದ್ವಂದ್ವ,
ನಿನ್ನರಿವಿಗೆ ಬರದ, ನಮ್ಮ ಪರಿಮಿತ ಕಟ್ಟುಪಾಡುಗಳೇನೋ?
ಶೂನ್ಯನಂತವು ನೀನು, ಖುಣಧನ, ನರಕ ಸ್ವರ್ಗಗಳು ನೀನು;
ಕ್ರೌರ್ಯದಯೆಗಳು ನೀನು, ಆಶೆನಿರಾಶೆ, ದ್ವೇಶಪ್ರೀತಿಯು ನೀನು;
ನೀನೆಲ್ಲದರ ತಂದೆ, ಆಧಾರ, ನಿನಗೆಲ್ಲವೂ ನಿನ್ನ ಸೃಪ್ಠಿಯಾಗಿರುವಾಗ,
ಒಂದು ಹಿಂದಿಲ್ಲ, ಒಂದು ಮುಂದಿಲ್ಲ, ನಿನಗೆ ಹಿತಹಿತವೆಂಬ ಬೇಧವೇ ಇಲ್ಲ,
ಇದನ್ನರಿಯದ ಕ್ಷುಲ್ಲಕರು ನಾವು, ಆಕಾಶವಳೆಯುವೆವೋ ಏನೋ, ಬರಿ ಮೊಳಕೈಯಿಂದ.

Friday, April 29, 2016
Topic(s) of this poem: life,philosophy
COMMENTS OF THE POEM
READ THIS POEM IN OTHER LANGUAGES
Close
Error Success