ಅಂಟಿಯೂ ಅಂಟದ ಕರ್ಮಯೋಗಿಯವನು Poem by Praveen Kumar in Bhavana

ಅಂಟಿಯೂ ಅಂಟದ ಕರ್ಮಯೋಗಿಯವನು

ಅವನು, ತುಂಬ ತುಂಟ,
ನಿಮಿಷ ಒಂದು ಸುಮ್ಮನಿರಲಾರ;
ನೋಡಿದ್ದರ ಮೇಲೇರಬೇಕು,
ಕಂಡದ್ದರ ಬಾಗಿಲು ತೆರೆಯಬೇಕು,
ಎಟುಕಿದಲ್ಲೆಲ್ಲ ಕೈ ಹಾಕಿ, ಏನೆಂದು ನೋಡಬೇಕು;
ನಡೆಯುವುದು ಗೊತ್ತಿಲ್ಲ, ಓಡುವುದೆ ಜಾಯಮಾನ;
ಎಲ್ಲದರಲ್ಲೂ ರಭಸ,
ಇದರಿಂದ, ಪ್ರತಿಯೊಂದರಲ್ಲೂ ಆಭಾಸ,
ಕೊನೆಗೆ, ಪೇಚುಬಿದ್ದು ಬರುತ್ತಾನೆ ಬಳಿಗೆ,
ಏನಾಯಿತೆಂದು, ನಮ್ಮ ಕೇಳುತ್ತಾನೆ.

ಆ ತುಂಟತನದ ಕಣ್ಣಿನಲಿ, ಅದೇನೋ ಆಳ,
ಮನಸ್ಸನ್ನು ತುಂಬುವ ಸ್ವಚ್ಚ ಬೆಳಕು;
ಅದೂ, ಒಂದು ಕಡೆ ನಿಮಿಷ ನಿಲ್ಲುವುದಿಲ್ಲ,
ಒಂದರಿಂದ ಒಂದಕ್ಕೆ, ಜಿಗಿಯುವ ಮಂಗನಾಟ;
ಏನೋ ಸಾಧನೆ ಮಾಡುವ ಗತ್ತು,
ಅದೇನೆಂದು ಅವನೊಬ್ಬನಿಗೆ ಮಾತ್ರ ಗೊತ್ತು;
ಏನೋ ನೆನಪಾದವನಂತೆ ಮಾಡುತ್ತಾನೆ,
ಎಲ್ಲೋ ಓಡಿಹೋಗಿ, ಆಟಿಕೆಯ ತಂದು,
ಮತ್ತೆಲ್ಲೋ ಇಟ್ಟು, ಏನೋ ಸಾಧಿಸಿದವನಂತೆ ಮೆರೆಯುತ್ತಾನೆ.

ಅವನದ್ದು ಸ್ವಚ್ಛ, ನಿಷ್ಕಳಂಕ ಮನಸ್ಸು,
ಕನ್ನಡಿಯಂತೆ ನೇರ, ಪಾರದರ್ಶಕ ಅವನು,
ಗಾಳಿಯಂತೆ ನಿಮಿಷ ನಿಮಿಷ ಬದಲಾಗುವ ಮನೋವೃತ್ತಿ;
ಅದರಂತೆ ಒಲೆದಾಡುವ ವ್ಯಕ್ತತ್ವದವನು;
ಒಳಗೊಂದು, ಹೊರಗೊಂದು, ಗೊತ್ತೇ ಇಲ್ಲ,
ಈಗ ಕೋಪ, ಮರು ಘಳಿಗೆ ನಗು, ಪ್ರೀತಿ, ಆಟ,
ಇದು ಈ ಪುಟ್ಟ ದೇವತೆಗೆ ಸರ್ವೇ ಸಾಮಾನ್ಯ.

ಎಲ್ಲರೂ ಒಂದೆ ಅವನಿಗೆ,
ಬೇಧ ಭಾವಗಳ ಕಳಂಕ, ಅವನ ಮುಟ್ಟುವುದಿಲ್ಲ;
ಬಳಿ ಬಂದವರನ್ನು, ನಗುವಿನಿಂದ ಬಳಿ ಸೆಳೆಯುತ್ತಾನೆ,
ದೂರವಿರುವವರನ್ನು, ದೂರವಿಡುತ್ತಾನೆ;
ಹಾಲು, ನೀರನು ಗುರುತಿಸಬಲ್ಲ ಹಂಸ ಅವನು;
ಬೆಲೆ ಬಾಳುವ ಊಡುಗೊರೆಗಳು, ಅವನಿಗೆ ಬೇಕಿಲ್ಲ,
ಶುದ್ಧ ಮನಸ್ಸಿನ ಪ್ರೀತಿ, ಬಲು ಅಚ್ಚುಮೆಚ್ಚು.

ನಕ್ಕರೆ, ಬೆಳದಿಂಗಳಂತೆ ಶುಭ್ರ, ಅತ್ತಾಗ,
ಅತ್ತಾ, ಕಾರ್ಮೋಡ ಮಳೆಯಂತೆ ದಟ್ಟ;
ಇದೆಲ್ಲ ಬರೆ, ಒಂದೊಂದು ನಿಮಿಷ ಮಾತ್ರ,
ಮರು ನಿಮಿಷ, ಅವನದ್ದು ಮತ್ತೊಂದೆ ಲೋಕ,
ತಾವರೆಯ ಎಲೆಯಂತೆ ನಿಸ್ಫ್ರಹ, ಪರಿಶುದ್ಧ;
ಎಲ್ಲರನು, ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ,
ಒಳ್ಳೆಯವರನು ಮಾತ್ರ, ಒಳಗೆ ಬಿಡುತ್ತಾನೆ,
ಶುದ್ಧ ಮನಸ್ಸಿನಿಂದ ಓಲೈಸುತ್ತಾನೆ;

ಇದಲ್ಲದೆ ದೇವಗುಣ, ಸಾತ್ತ್ವಿಕತೆಯ ಪ್ರಾಣ,
ಹಾಲು ಮನಸ್ಸಿನ, ನಿಷ್ಕಳಂಕ ಗುಣ!

ಅವನ ತೊದಲು ನುಡಿ,
ಹಾಲು ಹಣ್ಣಿನ, ಮೃದು ರಸದಂತೆ ಸಿಹಿ,
ಅವನೊಳಗಿನ ಭಾವಗಳ ಪರಿಪಾಕ ಅದು;
ಅವನ ಮಾತುಗಳು, ವಾಕ್ಯ ವ್ಯಾಕರಣಕೆ ಹೊರಗು,
ಆದರೂ ಅದರರ್ಥ, ಒಳಾರ್ಥಗಳು, ಅಂಗೈಯಂತೆ ಶುದ್ಧ;
ಅವನದ್ದು, ನಿಯಮ ಕಟ್ಟಳೆಗಳ ಮೀರಿರುವ ಲೋಕ,
ನಮ್ಮ ನಿಮ್ಮ, ಚಿಕ್ಕ ಲೋಕಗಳ, ಮೇರೆ ಮೀರಿದ ನಾಕ;
ಮೇಲು ಕೀಳು, ಬೇಧಭಾವಗಳಲ್ಲಿಲ್ಲ,
ದ್ವೇಶ ಮತ್ಸರ, ಮೋಸಗಳಿಗೆಡೆುಲ್ಲ;
ಅವನದ್ದು ಪರಿಶುದ್ಧ ಪ್ರೀತಿ, ಪ್ರಾಮಾಣಿಕತೆಯ ಸರಳ ಲೋಕ.

ಕಂಡದ್ದನ್ನು, ಹಿಂಜಿ ಹಿಂಜಿ ನೋಡುವ ಜಂಜಾಟ ಅವನದ್ದಲ್ಲ,
ಆಳಕ್ಕಿಳಿದು, ಮೇಲೇರುವ ಕಸರತ್ತು ಅವನಿಗೆ ತಿಳಿದಿಲ್ಲ;
ಕಂಡದ್ದನ್ನು, ಕಂಡಂತೆ ನೋಡುತ್ತಾನೆ,
ಒಳಗೆ ಹೊಳೆದಂತೆ, ಹೊರಗೆ ನಡೆಯುತ್ತಾನೆ;
ಅದಕ್ಕೇನೋ, ಯಾವ ಕ್ಲಿಷ್ಟತೆಯೂ ಅವನೆದುರು ನಿಲ್ಲುವುದಿಲ್ಲ;
ಅವನೂ ಸರಳ,
ಅವನಿಗೆಲ್ಲವೂ ಸರಳ,
ಈ ಸರಳತೆಯ ಸರಳತೆ ಕಂಡು, ನನ್ನ ಕ್ಲಿಷ್ಟತೆ ಆಸೂಯೆ ಪಡುವುದುಂಟು,
ನನ್ನ ಪ್ರೌಢತೆಯ ಬಗ್ಗೆ, ನಾನು ನಾಚುವುದುಂಟು.

ಅವನ ಕೋಪದಲ್ಲಿಯೂ, ಅದೇನೋ ಚೆಲುವು,
ಅವನ ಸಿಟ್ಟಿನಲ್ಲೂ, ಅದೇನೋ ಒಲವು,
ಅದು ಸಿಹಿಕೆನೆಯ, ಮೇಲೆ ತೇಲುವ, ಒಣ ಅಂಜೂರ ಕರ್ಜೂರದಂತೆ ರುಚಿ,
ಮಲ್ಲಿಗೆಯ ಸುವಾಸನೆಯ ಮಧ್ಯೆ ತೇಯ್ದ, ಗಂಧ ಸೌಗಂಧದಂತೆ,
ಅಲ್ಲಿ, ಮತ್ತೆ ಮತ್ತೆ ಬೇಕೆನಿಸುವಂತ, ಅದೇನೋ ಸಹಜ ಶುಚಿ.

ಅವನಿಗೆ, ಭಯವೆನ್ನುವುದಿಲ್ಲ,
ಅವನಿಗೆ, ಬೇಡವಾದುದೆ ಇಲ್ಲ,
ಕುತೂಹಲದ, ಚಿಕ್ಕ, ಚೊಕ್ಕ, ಗೊಂಬೆ ಅವನು,
ಉತ್ಸಾಹದ, ಪುಟ ಪುಟ ಪುಟಿಯುವ ಪಾದರಸ,
ದಣಿವು, ಬೇಸರಗಳ ಗೊಡವೆ ಇಲ್ಲದವನು;

ಒಂದರೆ ನಿಮಿಷ ಇಲ್ಲಿ,
ಒಂದರೆ ನಿಮಿಷ ಅಲ್ಲಿ,
ಎಲ್ಲೆಲ್ಲೂ, ಒಂದೇ ಕಾಲ ಕಾಣಿಸುವ ಕೃಷ್ಣನವನು;
ಎಲ್ಲರಿಗೂ ಸಮಸ್ಥಿತಿ,
ಎಲ್ಲರಿಗೂ ಅವನಿಂದ ತೃಪ್ತಿ,
ಎಲ್ಲರೂ ಬಳಿ ಕರೆಯುವ, ಗೋಪಿ ಕೃಷ್ಣನವನು.

ಬೇಕೆಂದಾಗ ಹಾಡುತ್ತಾನೆ,
ಬೇಕೆಂದಾಗ ಅಳುತ್ತಾನೆ,
ಬೇಕೆಂದಾಗ ಮನೆಮನ ತುಂಬ ಸುತ್ತಾಡುತ್ತಾನೆ;
ಅವನಿಗೆ ಇದು ಹೀಗೆಂದು ವಿಧಿಸುವ ಹಾಗಿಲ್ಲ,
ಕಟ್ಟು ಕಟ್ಟಳೆಗಳ ಭಾಧೆ, ಅವನ ಭಾಧಿಸುವುದಿಲ್ಲ;

ತನಗೆ ಕಂಡದ್ದೆ ಸತ್ಯ,
ತಾನು ಮಾಡಿದ್ದೆ ನಿತ್ಯ,
ಸುತರಾಂ, ತನ್ನ ದಾರಿ ಬಿಡುವವನಲ್ಲ;
ಆದರೆ, ಆ ಖಂಡಿತತೆಯಲ್ಲೂ, ಏನೋ ಸೌಮ್ಯತೆ,
ಏನೋ ಗುರಿ ಸಾಧನೆಯ ಏಕಾಗ್ರತೆ,
ಈಗಾಗಲೆ ಅಸ್ತಿವಾರ ಬಲಗೊಳಿಸುವ ನಿಸರ್ಗದಾಟ.

ಎಲ್ಲರೊಡನೆ ಆಡುತ್ತಾನೆ,
ಬೇರೆಯವರು ಮಾಡಿದ್ದನ್ನು, ತಾನೂ ಮಾಡುತ್ತಾನೆ,
ಬೇರೆಯವರಲ್ಲಿ ತನ್ನ ನೋಡುವುದೆ, ಅವನ ಸಂತೋಷ;
ಎಲ್ಲೂ ಅಂಟಿಕೊಳ್ಳುವವನಲ್ಲ,
ತನ್ನದನ್ನು ಯಾರಿಗೂ ಕೊಡುವವನಲ್ಲ,
ಆದರೂ, ತಾನು ತನದೆಂಬ ಭಾವ ಅವನಿಗೆ ಹತ್ತುವುದಿಲ್ಲ;
ಎಲ್ಲರೂ ಬೇಕೆನ್ನುವವನವನು,
ಆದರೆ, ತನ್ನ ದಾರಿಯಲಿ ಮಾತ್ರ ನಡೆಯುವವನು;
ಅಂಟಿಯೂ ಅಂಟದ, ಕರ್ಮಯೋಗಿಯವನು,
ಪುಟ್ಟ ಹೆಜ್ಜೆಯಲಿ, ಮೈತೋರುವ ಗೀತ ಕೃಷ್ಣನವನು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success