ರಾಜಕೀಯ Poem by Praveen Kumar in Bhavana

ರಾಜಕೀಯ

ಹೆಗ್ಗಣ, ಗೂಬೆ, ನರಿ, ತೋಳಗಳ,
ಓತಿ, ಕೋತಿ, ಕಾಗೆ, ರಣಹದ್ದುಗಳ,
ಸ್ಪರ್ಧೆ, ಹೋರಾಟಗಳ, ಕರ್ಮಭೂಮಿಯಯ್ಯ;
ರಾಜಕೀಯವು, ಹಗ್ಗ ಜಗ್ಗಾಟದ,
ಏಣಿ ಹಾವಿನ, ಏರು ಮೇರಿನ,
ಜಟ್ಟಿಗಳ ಮಲ್ಲಯುದ್ಧದ, ರಣರಂಗವಯ್ಯ.

ಕೆಳಗಿನವರ ಹೆಗಲೇರಿ ನಿಂತು,
ಮೇಲಿನವರ, ಬಾಚಿ ಕೆಳಗೆ ದಬ್ಬಿ,
ಮೋಡಕೆ ನೆಗೆಯಲೆಳಸುವ ಕಸರತ್ತು;
ಜೊತೆಗಿದ್ದವರ, ಕೆಳಗೆ ಚಚ್ಚಿ,
ಕೈಗೆಟಕೆದನ್ನೆಲ್ಲ, ಚಾಚಿ ಬಾಚಿ,
ತುಂಬದ ಹೊಟ್ಟೆ ತುಂಬುವ, ಬಕಾಸುರ ಕ್ರೀಡೆಯಯ್ಯ.

ಬಲವಿದ್ದಷ್ಟು ಕುಗ್ಗಿ ಸೇರಿ,
ಬಲವಿದ್ದಷ್ಟು ಹಿಗ್ಗಿ ಹಾರಿ,
ಒಂದೊಂದೆ ಭಿತ್ತಿ ಒಡೆದು, ಬೆಳೆಯುವ ಕಲೆ;
ಹೊಕ್ಕ ಬಾಗಿಲ ನೊಡೆಯುವ,
ಹಿಡಿದ ಕೈಯ ಕಡಿಯುವ,
ದಿಟ್ಟರಿಗಷ್ಟೆ ಇಲ್ಲಿ ತುಂಬ ಮಾರುಕಟ್ಟೆ ಬೆಲೆ.

ವ್ಯೂಹದೊಳಗಿನ ವ್ಯೂಹ, ರಾಜಕೀಯ,
ಹಾಲಿಟ್ಟವರಿಗೂ, ಕಡಿಯುವ ಹಾವು,
ಅಣ್ಣ ತಂದೆ ಗೆಳೆಯರಲ್ಲಿ, ಲೆತ್ತದಾಟದ ಪಗಡೆಗಳು;
ಒಪ್ಪು ತಪ್ಪು, ಗುಣವಗುಣಗಳ, ಮೆಟ್ಟಿ,
ನ್ಯಾಯನ್ಯಾಯ, ಪರಾಮರ್ಶೆಗಳ, ಕುಟ್ಟಿ,
ರಾಜ ಮಾಡುವ ಹೆಗ್ಗಡೆಗಳ ತುಂಡು ರಾಜ್ಯ.

ನರಿಗಳಂತೆ ವ್ಯೂಹಕಟ್ಟಿ,
ತೋಳಗಳಂತೆ, ಬೆಳೆ ಬೆಳೆದು,
ಕಾಗೆ, ರಣಹದ್ದುಗಳಂತೆ, ಕೊಳ್ಳೆಕಾಯುವವರ ಕಾಡು;
ಗೂಬೆಗಳಂತೆ, ಗೂಢವಾಗಿದ್ದು,
ಓತಿ, ಕೋತಿಗಳಂತೆ, ಮೂತಿ ಬದಲಿಸುತ್ತ,
ಹೆಗ್ಗಣಗಳಂತೆ, ಊರೂರನ್ನೆ ತಿಂದು ತೇಗುವವರ ಗೂಡು.
ಅಡ್ಡತಿಡ್ಡಿ, ಸಿಟಿಲು ದಾರಿಗಳ,
ಚೊಡ್ಡ ಚದುರಂಗ, ರಾಜಕೀಯ,
ಕಟ್ಟುಕಟ್ಟಲೆ ತಲೆ ಕುಕ್ಕಿ ನಡೆವ, ನಿರಂಕುಶ ವಾಸ್ತವಿಕದಾಶಟ;

ತಲೆಯೊಡೆದು, ಮನೆಮುರೆದೂ,
ನಾಡುದೇಶಗಳ, ಕೊಳ್ಳೆಯೊಡೆದೂ,
ತಾನು ರಾಜ್ಯವಾಳಬೇಕೆನ್ನುವವರ, ಸ್ವಾರ್ಥದಾಟ;

ಇಬ್ಬದಿ ಹರಿತದ ಕತ್ತಿ ಹಿಡಿದು,
ತನ್ನ ಕೊರಳು ಕೊಯ್ಯಲೆಳಸುತ್ತ,
ಎದುರಾಳಿಗಳ ಕರುಳು ಕತ್ತರಿಸುವುದು, ರಾಜಕೀಯ;

ಇಲ್ಲಿ ಬೆಳಕು, ಬೆಳಕಲ್ಲ,
ನೆರಳೂ, ನೆರಳಲ್ಲ,
ಇದು ಬಿಸಿಲ್ಗುದುರೆಗಳ ನಿಷ್ಠುರ, ದುಷ್ಟ, ನಾಗಾಲೋಟ.

Friday, April 29, 2016
Topic(s) of this poem: politics
COMMENTS OF THE POEM
READ THIS POEM IN OTHER LANGUAGES
Close
Error Success