ಭೂಮ್ಯಾಕಾಶಗಳ ಮೀರಿ ಹಾರಿ ದುಮುಕುವವಳು ನೀನು Poem by Praveen Kumar in Bhavana

ಭೂಮ್ಯಾಕಾಶಗಳ ಮೀರಿ ಹಾರಿ ದುಮುಕುವವಳು ನೀನು

ಬರಬೇಕಾದಾಗ, ಮುಚ್ಚಿದ್ದ ಬಾಗಿಲನು ಒಡೆದು,
ಹಾರಿ, ಕುಣಿದು, ಕುಪ್ಪಳಿಸಿ, ಭೋರ್ಗರೆದು ಬರುವವಳು ನೀನು;
ಬರಬೇಕಾದಾಗ, ಚಿತ್ತಭಿತ್ತಿಯ ರಂಧ್ರ ರಂಧ್ರದಿ ಸಿಡಿದು,
ಧಾರಾಕಾರ ಮಡುಕಟ್ಟಿ, ಹೊರ ಹರಿಯುವವಳು.

ಬರದಿರುವಾಗ, ಮರುಭೂಮಿಯೊಳಗಿನ ಒರತೆ;
ಹೊರ ಬರಲಾರಳು, ಬಂದರೂ ಧಾರಾಳತೆಯ ಕೊರತೆ;
ಮರಳು ಬಂಜರಿನಲ್ಲಿ ಸ್ಪುರಿಸಿದನ್ನೆಲ್ಲ ಹಿಂಗುವ ಬೇಗೆ,
ಮುಂದೆಳೆದಷ್ಟು ಒಳಗೊಳಗೆ ನುಸುಳುವುದೆ ಜಾಯಮಾನ.

ಬೆಳಕಾಗಿ ಮಿಂಚಿ, ಬಣ್ಣಬಣ್ಣದ ಲೋಕ ತೆರೆದಿಡುವ ನೀನು,
ಬ್ರಹ್ಮದೇವನ ಸುಂದರ, ನಿಜ ಅಪರಾವತಾರ;
ಬಣ್ಣಗಳ ಹೆಣೆ ಹೆಣೆದು ಕಟ್ಟುವ ನಿನ್ನ ಹೊಸ ಸ್ಠೃಷ್ಠಿ,
ಅಮೂರ್ತ ವಿಸ್ಮಯಗಳ ಸುಂದರ ಮನಮೋಹಕ ವ್ಠೃಷ್ಠಿ.

ಬರುವಾಗ ಒತ್ತೊತ್ತರಿಸಿ ನುಗ್ಗುತ್ತ ಬರುವವಳು ನೀನು,
ಹೊರಬಂದು ಪರಿಹಾರ ಕಂಡರೆನೆ ಚೆನ್ನ;
ಒಳಗೆನೆ ಕೂಡಿಟ್ಟರೆ, ಬೆಳೆದುಬ್ಬಿ, ಹಬ್ಬಿ, ನೋುಸುವ ನೀನು,
ಹೊರಹರಿದು ಮೈಮನಕೆ ಸಂತೋಲನ ತಂದರೆನೆ ಚೆನ್ನ.

ನಿನ್ನ ನಿರ್ಧಾರದಲಿ, ಗಂಗಾವತರಣಕ್ಕೆ ನೀನು ಸಿದ್ಧಳಾದಾಗ,
ಅದೇನು ರಭಸ, ಧಾರೆ, ಓಘ, ನಿನ್ನ ಒರೆತ ಮೊರೆತದಲ್ಲಿ;
ಹೃದಯ ಬುದ್ಧಿಗಳು ಸೋರಿ, ಶಬ್ದಪುಂಜಗಳು ಹಾರಿ,
ಭೂಮ್ಯಾಕಾಶಗಳ ಮೀರಿ, ಹಾರಿ, ಹೊರವುಕ್ಕುವವಳು ನೀನು.

ನಿನ್ನೊದೆತ, ಒಳಗೆ, ಗರ್ಭದೊಳಗಿನೆಳೆ ಜೀವ ಸುತ್ತಾಡುವಂತೆ,
ಅರಿಯದ, ತಿಳಿಯದ ಹೊಸಲೋಕಕ್ಕೆ ನಾಂದಿ;
ಹೊರ ಬಿದ್ದಾಗ ಬೆಳಕು, ಮಿಂಚು, ಹೊಸ ಬಣ್ಣಗಳ ಕಂತೆ,
ಹೊಸ ಹೊಸ ಕಲ್ಪನೆಗೆ, ಚಿಂತನೆಗೆ ಹೊಸತೊಂದು ಹಾದಿ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success