ಯಾರ ಹೆಗಲೇರಿ ನಡೆಯುತ್ತಿದೆ ನನ್ನೀ ಪಯಣ? Poem by Praveen Kumar in Bhavana

ಯಾರ ಹೆಗಲೇರಿ ನಡೆಯುತ್ತಿದೆ ನನ್ನೀ ಪಯಣ?

ನಾನೆಲ್ಲಿಂದ ಬಂದೆ, ಮುಂದೆಲ್ಲಿಗೆ ಪಯಣ?
ಯಾರ ಹೆಗಲೇರಿ, ನಡೆಯುತ್ತಿದೆ ನನ್ನೀ ಪಯಣ?
ಯಾವಾಗ ಮೊದಲುಗೊಂಡು, ಯಾವ ಕಾಲದವರಗೆ,
ಯಾವೊದ್ದೇಶದಿ ನಡೆಯಬೇಕೋ, ಈ ಪಯಣ?
ಸೂತ್ರ ಹಿಡಿದವರಾರು, ಪಾತ್ರ ನಿರ್ಮಿಸಿದವರಾರು,
ಒಂದೂ ತಿಳಿಯದೆ ನಾನು, ರಂಗದ ಮೇಲಿರುವೆನಲ್ಲ!

ಎಲ್ಲಿದೆ ಯಾವ ಏರು, ಎಲ್ಲಿಂದ ಬರುವುದೋ ಜಾರು,
ಎಲ್ಲಿಯಡಗಿದೆ, ಅಡವಿ, ಬೆಟ್ಟ, ಕಂದರಗಳ ಸಾಲು,
ಬಿದ್ದೆದುರು ಜೀವ ನಡುಗಿಸುವುದೋ, ತಿಳಿದವರಾರು?
ಎಲ್ಲಿಂದ, ಯಾವ ನರಿ, ತೋಳ, ಹುಲಿ, ದೆವ್ವ, ಪ್ರೇತಗಳ ಹಿಂಡು,
ಪ್ರತ್ಯಕ್ಷಗೊಂಡು, ಮೈಮೇಲೆ ಬರುವುದನು ಕಂಡು,
ಮರಿ ಹುಲ್ಲೆಯಂತೋಡುವೆನೋ ನಾನು, ತಿಳಿದವರಾರು?

ಇದೊಂದು ಏಣಿಹಾವಿನ ಆಟ, ಚಕ್ರವ್ಯೂಹದ ಹೂಟ;
ಒಳಗೆ ಸೇರಿದ ಮೇಲೆ, ಬರೆ ಸುತ್ತು ಸುತ್ತು ಸುತ್ತುವ ಆಟ;
ಆಕಾಶದ ತುಂಬ, ಗೋತ ಹೊಡೆಯುವ ಗಾಳಿಪಟದಂತೆ ಎಲ್ಲ,
ಯಾವುದೇ ಸೂತ್ರ, ಯಂತ್ರ, ತಂತ್ರಗಳ ಗೊಡವೆನೆ ಇದಕ್ಕಿದ್ದಂತಿಲ್ಲ;
ಕಾಲದ ಹೆಗಲೇರಿ, ನಾಗಾಲೋಟದಿ ಗೊತ್ತು ಗುರಿ ಮರೆತು,
ಎಳೆತ, ಸೆಳೆತದ ದಿಕ್ಕಲ್ಲಿ, ಸುತ್ತು ಸುತ್ತು ಸುತ್ತುವುದೆ, ಜೀವನವೋ ಏನೋ?

ಸಂಜ್ಞೆ ಸೂಚಿಗಳಿಲ್ಲ, ಯಾವುದು, ಏನೆಂದು ಹೇಳುವವರಿಲ್ಲ.
ನಡೆದದ್ದೆಲ್ಲಿ, ಮುಂದೇನಿದೆಯೆಂದು ತಿಳಿಯುವಂತಿಲ್ಲ;
ಆರಂಭದಿಂದ ಕೊನೆತನಕ, ಮಬ್ಬುಕತ್ತಲು ಸುತ್ತಲು,
ಮರಳುದಾರಿ, ಜೀವದ ಭಾರ, ಶಾಶ್ವತ ಗುರುತು ಮಾಡುವುದಿಲ್ಲ;
ಹೂತ ಕಾಲನ್ನೆತ್ತಿ, ಮುನ್ನಡಿುಡದೆ ಗತ್ಯಂತರವಿಲ್ಲ,
ಯಾಕೋ ಏನೋ, ಇದು ನಡೆಯಲೆಂದೆ ನಡೆಯುವ ನಿರಂತರ ಪಯಣ.

ಕಾಲದ ಮೈಮೇಲಿನ ಕ್ಷುಲ್ಲಕ ಬುದ್ಬುದಗಳು ನಾವು;
ಕಾಲದಲೆಯೊಡನೆ, ಮೇಲೇರಿ, ಕೆಳಗಿಳಿದು, ಹರಿಯುವ ನಾವು,
ಮತ್ತೆ, ಕಾಲದೊಡನೆ ಬೆರೆಯದೆ ಗತ್ಯಂತರವಿಲ್ಲ;
ಕಾಲದ ಈ ಬುರುಗಿನಲ್ಲದೇನು, ಹರ್ಷ ನೋವಿನ ಮೇಲಾಟ!
ನಾನವನೆಂಬ, ನಾವವರೆಂಬ, ಪ್ರತಿಷ್ಠೆಗಳ ಸೆಣಸಾಟ!
ಕಾಲದ ತಲೆ ಮೇಲೇರಿ, ನೆಲ ಕುಟ್ಟಿ ನಲಿವ ಉನ್ಮಾದ!
ಇದೆಲ್ಲ, ಬರೆ ಆಕಸ್ಮಿಕ ಬುರುಗುಗಳ ನಿರರ್ಥಕ ಗೊನೆಯೆ?
ನಿರ್ವರ್ಣ, ನಿರಾಕಾರ, ನೀರವ ಕಾಲವೆ, ನಮ್ಮೆಲ್ಲರ ಕೊನೆಯೆ?
ಹಿಂದಿಲ್ಲ, ಮುಂದಿಲ್ಲ, ಇಂದಿರುವದೊಂದೆ ಈ ಜೀವನದ ಅರ್ಥ?
ಶೂನ್ಯದಿಂದೀ ಆಳ, ವೈಶಾಲ್ಯ ಹೇಗೆ ಬರಲು ಸಾಧ್ಯ?
ಜೀವನದ ವೈವಿಧ್ಯ ಮಾರ್ದವತೆ, ಕಾಲಕ್ಕೆ ಹೇಗಿರಲು ಸಾಧ್ಯ?
ಕಾಲಕ್ಕೆ ಮೂಲದ್ದೊಂದು ಕೈ ಹಿಡಿದು, ನಮ್ಮ ನಡೆಸುತ್ತಿಯೇನು?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success