ಮುನ್ನಡೆ ಗುರಿಯತ್ತ ನಡೆಯುತ್ತಿರಬೇಕು Poem by Praveen Kumar in Bhavana

ಮುನ್ನಡೆ ಗುರಿಯತ್ತ ನಡೆಯುತ್ತಿರಬೇಕು

ಸಾವಿರ ಬಣ್ಣದ, ಸಾವಿರ ಬೆಳಕಿನ,
ಸಾವಿರ ಸಂಯೋಗಕೆ, ಮೈಯೊಡ್ಡಿದ ನಮಗೆ,
ಸಾವಿರ ಏರಿಳಿತದ, ಸಾವಿರ ಮೆಟ್ಟಲಿನ,
ಸಾವಿರ ದಾರಿ, ಎದುರಿರುವ ಈ ನಮಗೆ,
ಕತ್ತಲ ಬಿತ್ತರ ಸುತ್ತಲು ಹಬ್ಬುವ,
ಅಡೆತಡೆ ಗೋಡೆಯ ಗೊಡವೆಯು ಬೇಕೆ?

ಸಾವಿರ ಊರಿನ, ಸಾವಿರ ನದಿಗಳ,
ಸಾವಿರ ರುಚಿ, ಕಹಿಯನುಭವಿಸಿದ ನಮಗೆ,
ಸಾವಿರ ಜನಗಳ, ಸಾವಿರ ಬಗೆಗಳ,
ಸಾವಿರ ರೂಪಾಟೋಪ ನೋಡಿದ ನಮಗೆ,
ಹಸಿವು, ಬಾಯಾರಿಕೆ, ಹೊಸ ಜನ, ಸ್ಥಳವೆಂಬ,
ಅಳುಕು, ನಾಚುಕೆ ಉಸಬರಿಯೇಕೆ?

ಕಣ್ಣಿನ ಬೆಳಕಿನ ವಿಸ್ತಾರವ ದಾಟಿದ,
ಉದ್ದಗಲದ ಎತ್ತರ ಎದುರಿರುವಾಗ,
ಬರಿದಾಗದ ಧಾರಾಳತೆಯ, ಶ್ರೀಮಂತ ನಿಸರ್ಗ,
ನಮ್ಮೆದುರಲಿ, ತನ್ನ ಮೈ ತೆರೆದಿರುವಾಗ,
ಅಭಾವದ ಭಯದಲಿ ತತ್ತರಿಸುವುದೇಕೆ,
ಬಿಲದಿಲಿಯಂತೆ, ವಿಲವಿಲವೊದ್ದಾಡುವುದೇಕೆ?

ಕೈ ಕಾಲಿನ ಅಳವು, ಗುಂಡಿಗೆ ಬಲವು,
ಅಂತ: ಕರಣವೂ, ಪ್ರಜ್ಞೆ, ನಮ್ಮೊಡನಿರುವಾಗ,
ಮೇಲೆತ್ತಿದ ಕಾಲು, ಹಿನ್ನಡಿಯಿಡಬೇಕೆ?
ದೂರದ ಗುರಿಯಲಿ, ದಿಟ್ಟಿ ನೆಟ್ಟಿರುವಾಗ,
ತೊಟ್ಟ ಬಾಣದ ನೇರ ಸರಿುರುವಾಗ,
ಕೊನೆ ಗಳಿಗೆಯ ಅಸ್ಥಿರತೆ, ಅಧೀರತೆಯಾಕೆ?

ರೆಕ್ಕೆಯ ಬಲ ಹೃಸ್ವಿಸಿ ಉಡುಗುವವರೆಗೆ,
ಹಾರಲಿ ಹಕ್ಕಿ, ಆಕಾಶದ ಉದ್ದಗಲದ ತುಂಬ;
ಮೈತುಂಬಿದ ಕಸುವು, ಬಳಲಿ ಬತ್ತುವವರೆಗೆ,
ಮುನ್ನಡೆ ಗುರಿಯತ್ತ ನಡೆಯುತ್ತಿರಬೇಕು;
ಅಂತ: ಸತ್ವದ ಕಣಕಣ, ಮನ ತುಂಬುವವರೆಗೆ,
ಅಂತ: ಕರಣದ ನೇರಕೆ, ನಡೆಯುತ್ತಿರಬೇಕು.
ನಾವು, ನಾವಾಗಿ, ಬಾಳಿದರೆನೆ ಚಂದ;
ನಮ್ಮ ಗುರಿ, ದಾರಿ, ನಮಗಿದ್ದರೆನೆ ಚಂದ;
ನಮ್ಮೊಳಗಿನ ಪ್ರಜ್ಞೆ, ಒಳಗೊಳಗಿನ ಸಂಜ್ಞೆ,
ನಮ್ಮ ಕೈಹಿಡಿದು, ಮುನ್ನಡೆಸುವುದೆ ಚಂದ;
ಲೋಕದ ಏರಿಳಿತಗಳ, ಜಾಡು ಹಿಡಿದು,
ಅಂತ: ಕರಣದಾಜ್ಞೆಗೆ ತಲೆ ಬಾಗುವುದೆ ಬಾಳು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success