ಸ್ವಂತಿಕೆಯ ಕೆಚ್ಚು ಲೋಕಕ್ಕೆ ಕಿಚ್ಚು ಹಚ್ಚುವಾಗ Poem by PRAVEEN KUMAR Kannada Poems

ಸ್ವಂತಿಕೆಯ ಕೆಚ್ಚು ಲೋಕಕ್ಕೆ ಕಿಚ್ಚು ಹಚ್ಚುವಾಗ

ಸೋಲ ಬಲ್ಲವರನ್ನು, ಸೋಲಿಸಬಹುದು,
ಸೋಸುವುದಿಲ್ಲವೆನ್ನುವವರು ಸೋಲುವುದು, ಹೇಗೆ ಸಾಧ್ಯ?
ಗೆಲ್ಲಬಲ್ಲವರನ್ನು, ಗೆಲ್ಲಿಸಬಹುದು,
ಗೆಲ್ಲುವ ಛಲವಿಲ್ಲದವರು ಗೆಲ್ಲುವುದು, ಹೇಗೆ ಸಾಧ್ಯ?
ಗೆಲ್ಲುವುದು, ಸೋಲುವುದು, ನಮ್ಮನಮ್ಮಂತರಂಗದ ರೀತ್ಯ,
ಗೆಲ್ಲುವುದು, ಸೋಲುವುದು, ಬರೇ ಗ್ರಹಿಕೆಯ ಸತ್ಯ;
ಸೋಲುಗೆಲುವನ್ನೇರಿ ನಿಂತವರಿಗೆ, ಸೋಲು ಎಲ್ಲಿ?
ಗೆಲುವು ನೆರಳಿನಂತೆ ಬೆನ್ನು ಹಿಡಿದು ಬರುವ ಪರಿವಾರ ಅಲ್ಲಿ
ಒಳಗೊಳಗಿನ ಮಥನದ ವಿಷ ಅಥವ ಬೆಣ್ಣೆ,
ಕಾಣುವ ಕಣ್ಣಿನ ಕಲ್ಪನೆಯ ಸನ್ನೆ.

ಒಳಗೆ ಉಕ್ಕಿರುವಾಗ, ಹೊರಗೆ ಹೀಗಿದ್ದರೇನು?
ಸತ್ತ್ವ ಉಕ್ಕಿ ಬರುವಾಗ, ಹಿಂದೆಮುಂದೆಯ ಪರಿವೆಯೇನು?
ನಡೆದದ್ದೆ ದಾರಿ, ಸೇರಿದ್ದೆ ಗುರಿಯ ಲಕ್ಷ್ಯ,
ಹಿಡಿದದ್ದೆ ಪರಮೋನ್ನತ ವಿಜಯದ ಸಂಕೇತ;
ಸ್ವಂತಿಕೆಯ ಕೆಚ್ಚು, ಲೋಕಕ್ಕೆ ಕಿಚ್ಚು ಹಚ್ಚುವಾಗ,
ಆ, ಈ, ಚಿಕ್ಕಪುಟ್ಟ ಗೋಡೆ, ದಿನ್ನೆ, ಕಣಿವೆಗಳ ಗೊಡವೆ ಬೇಕೆ?
ಸ್ವಂತಿಕೆಯ ಕೆಚ್ಚು, ಒಳಗೊಳಗೆ ಚಿಮ್ಮಿ ಹೊರ ಜಿಗಿಯುವಾಗ,
ಬೊಗಸೆಯಲ್ಲಿ ಅಳೆಯುವುದು ಸಾಧ್ಯವೇನು?
ತಗ್ಗು, ದಿನ್ನೆಗಳ ಮರೆತು, ಭೋರ್ಗರೆದು ಹರಿಯುವ ತುಂಬು ನದಿಯ,
ಏರಿಳಿತಗಳ ನಡೆಯಿಂದ, ನೋಡುವುದು ಸರಿಯೆ?
ರೌದ್ರ ಬಿಸಿಲಿನ ಕಿರಣಗಳ ಗಾಢತೆಯ ಅಳತೆ
ಬಿಸಿಲೇರಿದ ಕಾಡುಮೇಡುಗಳ ಮೇಲೆ ನಿಲ್ಲುವುದು ಸರಿಯೆ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success