ಕೇವಲಕೆ ಕವಲೊಡೆವ ಆತುರವು ನನ್ನಲ್ಲಿ Poem by Praveen Kumar in Bhavana

ಕೇವಲಕೆ ಕವಲೊಡೆವ ಆತುರವು ನನ್ನಲ್ಲಿ

ತಿಳಿಯಾಕಾಶದಲಿ, ನೀಲದಾಳದಲ್ಲಿ,
ಗುರುತು ಪರಿಧಿಯ ಮರೆತು, ಮೀರಿ, ಹಾರಿ,
ಅನಂತ ಕೇರುವ ಆಶೆ ಮನದಲ್ಲಿ;
ನೆಲ ನಿರ್ಬಂಧ ಜಾರಿ, ದಿಗಂತ ಕಟ್ಟಳೆ ತೂರಿ,
ಕಾಲಕೋಶ ಪಾಶ ಹರಿದು, ಮೇಲೆ ಸರಿದು,
ಕೇವಲಕೆ ಕವಲೊಡೆವ ಆತುರ ನನ್ನಲ್ಲಿ;
ಎಡಬಲದಲ್ಲಿ, ಅಷ್ಟದಿಕ್ಕುಗಳಲ್ಲಿ,
ನಾನು ನೀನೆಂಬ ಗೋಡೆಗಳ ಕೆಡವಿ,
ನಾನೇ ಆಕಾಶದನಂತವಾಗುವ ಆನಂದ,
ಆ ನಿರ್ಭಾರದ ದಿವ್ಯ ಅನುಭವವೆ ಚಂದ.

ಕರೆದು ಹಿಡಿವವರಿಲ್ಲ, ಅಳೆದು ಕಟ್ಟುವವರಿಲ್ಲ,
ಯಾಕೆ ಹೇಗೆಂಬ ಬಲೆ ಬೀಸುವವರಿಲ್ಲ;
ಹಾರಿದ್ದೆ ದಾರಿ, ಹೋದದ್ದೆ ದೂರ,
ಕೊನೆಯ ಗುರಿಯೆಂಬ ತವಕ ಆತಂಕಗಳಿಲ್ಲ;
ಜಯಪಜಯಗಳ ಆಶೆ ಈ ತೃಪ್ತಲೋಕದಲ್ಲಿಲ್ಲ;
ಕವಚಗಳ ಕವಚಿ, ಮೇಲೆ ಮೇಲೇರುತ್ತ,
ಸರ್ವಾನಂದದ, ಮಹಾಸಾಗರದತ್ತ,
ಈ ಒಂದೊಂದು ಹೆಜ್ಚೆ, ಒಂದೊಂದು ಹೊಸ ಪ್ರಜ್ಞೆ;
ಸುಪ್ತ ಲೋಕದಿ, ಪ್ರಜ್ಞ ಲೋಕಕ್ಕೆ ಪಯಣ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success