ಲೋಕವೆಂಬುವುದೊಂದು ಚಕ್ರಬಂಧದ ವ್ಯೂಹ Poem by Praveen Kumar in Bhavana

ಲೋಕವೆಂಬುವುದೊಂದು ಚಕ್ರಬಂಧದ ವ್ಯೂಹ

ನಡೆದಂತೆ, ದಾರಿ ಸವೆದುದೆ ತಿಳಿಯಲ್ಲಿಲ್ಲ,
ದಿನಕಳೆದು, ಸಂಜೆ, ಕತ್ತಲಾಯಿತಲ್ಲ;
ಅರುಣೋದಯದಲ್ಲಿ, ಆ ಆಹ್ಲಾದದ ಹುರುಪಲ್ಲಿ,
ಕನಸುನೆನಸುಗಳ, ಏನೇನೋ ಬುತ್ತಿಗಳ ಕಟ್ಟಿ,
ನಿದ್ದೆಯ ಜೊಂಪಿನಲಿ, ನನ್ನ ಊರು ಬಿಟ್ಟ ನೆನಪು;
ದೂರ ದಾರಿಯಗುಂಟ, ಎಲ್ಲಿ ಹೇಗೆಂದೆ ನಡೆ,
ಕಣ್ಣು ಆಕಾಶದಲ್ಲಿಟ್ಟು, ದೂರ ಕ್ರಮಿಸಿದ ನೆನಪು.

ಲೋಕವೆಂಬುವುದೊಂದು, ಚಕ್ರಬಂಧದ ವ್ಯೂಹ,
ಎಲ್ಲಿ ಹೊರಟವರೆಲ್ಲ ಮುಟ್ಟುವರೆನ್ನುವ ಗುಟ್ಟು,
ತಿಳಿದವರಿಲ್ಲಿಲ್ಲ, ಸ್ಠೃಕರ್ತನ ಬಿಟ್ಟು;
ನಡೆದದ್ದು ಕೆಲವು, ಶ್ವಾಸ ಬಿಗಿ ಹಿಡಿದು ಓಡಿದ್ದು ಹಲವು,
ಬಿದ್ದೆದ್ದು, ನೋವು ಮರೆತು, ಮುನ್ನುಗ್ಗಿದುದು ಕ್ಷಣಕ್ಷಣವು;
ಇದು ಜೀವನವೆಂದು, ಹಿಂದು ಮುಂದನು ಮರೆತು,
ಇಂದು ಇಂದಿಗೆಯೆಂದು, ಬಂದು ಬಂಧನ ಮರೆತು,
ಏಕ ಧ್ಯಾನದಿ ನಡೆದು, ದಿನಕಳೆದುದು ತಿಳಿಯಲಿಲ್ಲ.

ನಿದ್ದೆ ಕಳೆದಿದೆ ಈಗ, ಬಳಲಿ ಬೆಂಡಾಗಿದೆ ಜೀವ,
ಸುತ್ತ ಸಂಜೆಯ ಕೆಂಪು, ಕತ್ತಲಲ್ಲಿಳಿಯುತ್ತಿದೆ,
ಬೆಳಕಿನ ದಾರಿಗಳು, ಕತ್ತಲಲಿ ಮುಚ್ಚುತ್ತಿವೆ;
ಎಲ್ಲಿಂದೆಲ್ಲಿ ಮುಟ್ಟಿದೆಯೆಂದು ಕಣ್ಣಾಡಿಸಿದಾಗ,
ಕತ್ತಲನು ಬಿಟ್ಟು, ಬೇರೆ ಕಣ್ಣು ಮುಟ್ಟುವುದಿಲ್ಲ;
ಸಂಜೆಯ ವಿರಹರಾಗ, ಹೃದಯ ತುಂಬ ತುಂಬಿ ಬಂದು,
ಹಣ್ಣಾದ ಜೀವಕ್ಕೆ, ನಿದ್ದೆಯ ಜೊಂಪು ಹಿಡಿಸುತ್ತಿರುವುದಲ್ಲ!

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success