ನನ್ನ ಹೆಂಡತಿ Poem by Praveen Kumar in Bhavana

ನನ್ನ ಹೆಂಡತಿ

ಆ ಬಿಳಿ ಮೂತಿಯ ಹುಡುಗಿ
ಮನೆ ತುಂಬ ಹಾರಾಡುವ ಕೋಡಂಗಿ
ನನ್ನ ಹೆಂಡತಿ,
ದಿನವಿಡಿ ಬಡಬಡಿಸುತ್ತಾಳೆ.
ನಾ ಬಡಬಡಿಸಿದರೆ ಸುಮ್ಮನಿರುತ್ತಾಳೆ,
ಮನೆ ಕಾಯುತ್ತಾಳೆ,
ಯಜಮಾನಿಕೆ ತೋರುತ್ತಾಳೆ,
ಹೊಸಬರೆದುರು ನನ್ನ ಮುಂದೆ ದೂಡುತ್ತಾಳೆ.

ಅದು ಇದು ಬೇಕನ್ನುವವಳಲ್ಲ,
ಅದು ಇದು ತಂದರೆ ಸುಮ್ಮನಿರುವವಳಲ್ಲ,
ಹಿಂಜಿ ಹಿಂಜಿ ನೋಡಿ, ಗಂಜಿಯಾಗಿ ಮಾಡಿ
ಹುಳುಕುಗಳ ಹುಡುಕಿ ಹೊರಗೆ ತೆಗೆಯುತ್ತಾಳೆ,
ಅಪ್ರಯೋಜಕ ನಾನೆಂದು ರಂಪ ಮಾಡುತ್ತಾಳೆ.

ಗೂಡಿಂದ ಹೊರಗೆ ತಲೆಯಿಟ್ಟವಳಲ್ಲ,
ಹರಟೆಗಳ ಗೋಜಿಗೆ ಹೋಗುವವಳಲ್ಲ,
ಆದರೂ,
ನೆರೆಮನೆಯಿಂದ ನೆರೆದೇಶದವರೆಗೆ
ಅವಳಿಗೆ ತಿಳಿಯದುದಿಲ್ಲ;
ಸ್ವರ ಎತ್ತಿದವಳಲ್ಲ,
ಬಾಗಿಲು ದಾಟಿದವಳಲ್ಲ,
ಹಾಗೆಂದು ಯಾರಿಗೂ ಅವಳು ತಿಳಿಯದವಳಲ್ಲ,
ಮನೆ ಹಜಾರದಿ ಹಿಡಿದು, ಅಡುಗೆ ಕೋಣೆಯವರೆಗೆ
ನೆರೆಕೆರೆಯಲ್ಲೆಲ್ಲ ಅವಳದೆ ಸುದ್ಧಿ, ಗೌಜು.

ಉಪಗ್ರಹದ ಹಾಗೆ ನನ್ನ ಸುತ್ತು ಸುತ್ತುತ್ತಾಳೆ,
ನಿಲ್ಲೆಂದರೆ ನಿಲ್ಲುವುದಿಲ್ಲ,
ಬಳಿ ಬರುವುದು ಇಲ್ಲ,
ದೂರ ಹೋಗುವುದಿಲ್ಲ,
ಪತ್ನಿ ಪಥವಿವೆಂದು
ನನ್ನ ತಲೆ ತಿನ್ನುತ್ತಾಳೆ;
ಸೂತ್ರ ಹಿಡಿದ ಬೊಂಬೆಯ ಹಾಗೆ
ಎಳೆದಲ್ಲಿ ಬರುತ್ತಾಳೆ.
ಆದರೆ ಎಲ್ಲಿ ಎಳೆಯಬೇಕೆಂದು ತಾನೇ ವಿಧಿಸುತ್ತಾಳೆ,
ಹಾಗೆ ತನ್ನನ್ನೆಳಿಸಿಕೊಳ್ಳುತ್ತಾಳೆ;
ನಾನವಳ ಸೂತ್ರವೋ
ಅವಳೆನ್ನ ಸೂತ್ರವೋ ನಾ ತಿಳಿಯಲಾರೆ.

ಕಣ್ಣು ಕೆಕ್ಕರಿಸಿ ನನ್ನ ನೋಡಿದವಳಲ್ಲ,
ಹಾಗೆಂದು ಬೇರಾರಿಗೂ ನಾನಷ್ಟು ಹೆದರಿದವನಲ್ಲ,
ಇರುವುದೋ ಬರೆ ಐದು ಅಡಿಯ ಸ್ವಲ್ಪ ಮೇಲೆ,
ಹಾಗೆಂದು ಬೇರಾರೂ ನನಗಷ್ಟೆತ್ತರ ಕಂಡವರಿಲ್ಲ;
ನಾನವಳ ತಿಳಿಯದುದಿಲ್ಲ,

ಹಾಗೆಂದು ನಾನೆಂದು ಅವಳ ಅರಿತವನಲ್ಲ,
ಪ್ರತಿಬಾರಿ ಅವಳೇ ಸೋಲುವಳೆಂದು ಕಂಡರೆ
ಕೊನೆಗೆ ಗೆಲ್ಲುವವಳು ಅವಳೆ,
ಮುಂದೆ ನಡೆಯುವವನು ನಾನು, ಹಿಂದೆ ಅವಳು,
ಹಿಂದಿನಿಂದ ನನ್ನನ್ನು ಮುನ್ನಡೆಸುವವಳು ಅವಳು;
ಇದ್ದಾಗ ಇಲ್ಲದೆ, ಇಲ್ಲದಾಗ ಇದ್ದು
ನನ್ನ ಇದ್ದ ಇಲ್ಲದ ಗುಟ್ಟನ್ನೆಲ್ಲ ಕಂಡು ಹಿಡಿದು
ಬೇಸ್ತು ಬೀಳಿಸುತ್ತಾಳೆ.

ಅವಳ ಕಣ್ಣು ಕ್ಷ-ಕಿರಣ,
ಜೇಬು, ಮನಸ್ಸು, ಹೃದಯ ಸೀಳಿ ನೋಡುತ್ತಾಳೆ,
ಎಲ್ಲ ಬಿಚ್ಚಿ ಬಿಡುತ್ತಾಳೆ,
ತುಟಿ ಪಿಟುಕೆನ್ನುವುದಿಲ್ಲ;
ಹಾಗೆಂದು ಮುಜುಗರ ನನ್ನ ಬಿಡುವುದಿಲ್ಲ;
ಅವಳದು ಸೀಳು ಕಣ್ಣು,
ಅದರಲ್ಲೂ ಮಧುರ ಭಾವನೆಯ ಗಿಣ್ಣು,
ತಿಳಿ ಹಾಸ್ಯದ ಮಿಂಚು,
ಯಾವುದು ಎಲ್ಲೆಂದು ನಾನು ಗಲಿಬಿಲಿಗೊಂಡದ್ದೆ ಹೆಚ್ಚು.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success