ಮುನ್ನಡೆ Poem by Praveen Kumar in Bhavana

ಮುನ್ನಡೆ

ನಿನ್ನ ಮಾರ್ಗ ಸುಗಮವಿದೆ, ಹಲವು ದಾರಿ ಎದುರು ಇದೆ,
ನಿನ್ನ ನಡೆಗೆ ಗೋಡೆ ಕಟ್ಟಿ, ಯಾರು ಪಯಣ ತಡೆಯರು,
ನಡೆಯುವಾಗ ಬಳ್ಳಿ ತೊಡರಿ, ಹೆಜ್ಜೆ ತಪ್ಪಿ ಬೀಳಬೇಡ,
ಕಣ್ಣು ಬಿಟ್ಟು ಕಾಲನಿಟ್ಟು, ಎದೆಯನೆತ್ತಿ ಮುನ್ನಡೆ.

ದೂರವರ್ತಿ ಪಯಣದಲ್ಲಿ ಕೆಲವು ತೊಡರು ಸಹಜ ತಾನೆ,
ಧೃತಿಯ ಕೆಡದೆ ಹಠವ ಬಿಡದೆ ನಿನ್ನನರೆತು ಕಾಲಿಡು,
ಕೆಲವು ದಾರಿ ಏರಲಿದೆ, ಕೆಲವು ದಾರಿ ಇಳಿಯಲಿದೆ,
ಏರು ಇಳಿತ ಎಲ್ಲ ನಿನ್ನ ನಡೆಗೆ ಇರುವ ಮಾರ್ಗವು.

ಬೆಟ್ಟದಾಚೆ ಊರು ಇದೆ, ನಿನ್ನ ಎಲ್ಲ ಕನಸು ಇದೆ,
ಸಾವಿರಾರು ದಾರಿಗಳ ಚಕ್ರಬಂಧ ಎದುರು ಇದೆ,
ಕಾಲದುದ್ದ ನಿನ್ನ ಮಾರ್ಗ ಮುಂದೆ ಮುಂದೆ ನಡೆಸುತ್ತಿದೆ,
ಎಲ್ಲಿ ಹೇಗೆ ಎಂದು ನೀನು ತಲೆಯ ಚಚ್ಚಿ ಕೊಡುವ ಬೇಡ.

ಹಿಡಿದ ದಾರಿ ದೂರವೆಂದು, ಕಾಲು ಬಳಲಿ ನೋುತೆಂದು
ಪಯಣ ಸಹಜ ದಣಿವಿನಿಂದ ನಡೆವುದನ್ನು ತಡೆಯಬೇಡ,
ಪ್ರಪಾತದಲ್ಲಿ ನಿಂತೆಯೆಂದು, ಬೆಟ್ಟ ನಿನಗೆ ದುಸ್ಸಾಧ್ಯವೆಂದು
ಕಣ್ಣು ಕವಿದು, ಹುರುಪು ಇಳಿದು ಇದ್ದಲ್ಲೆ ನೀನು ನಿಲ್ಲಬೇಡ.

ನಿನ್ನ ಅಳವು ಇರುವ ವರೆಗೆ, ಅದನು ನೀನು ಅರಿವ ವರೆಗೆ
ದುಷ್ಟಶಕ್ತಿ ಹೂಟ ಆತ ನಿನ್ನ ಮುನ್ನಡೆ ತಡೆಯದು,
ಸ್ವಶಕ್ತಿ ನಂಬಿ ಕಾಲನಿಟ್ಟ ಯಾರು ಸೋಲನರಿಯರು,
ಸ್ವಂತ ಅಳವಿನಿಂದ ಮುಂದೆ ಸ್ಥೈರ್ಯದಿಂದ ನಡೆವರು.

ಅಡ್ಡ ತಿಡ್ಡಿ ಗೋಡೆ ಬೇಲಿ, ಹೊಡೆತ ಬಡಿತ ಪೋಲಿಗೇಲಿ
ಸಾರ್ವಜನಿಕ ಮಾರ್ಗದುದ್ದ ವಿಧಿಯು ತರುವ ಆಟವು,
ಬಂದದನ್ನು ಎದುರುಗೊಂಡು, ತನ್ನ ಮಾರ್ಗ ಹಿಡಿದು ನಡೆವ
ಜಾಣ ಬೇಗ ನಡೆವ ಮುಂದೆ, ತನ್ನ ಗುರಿಯ ಸೇರುವ.

ನಿನ್ನ ನಡೆಗೆ ಅಳತೆಗೋಲು, ನಿನ್ನ ಆಳ, ನಿನ್ನ ಅಳವು,
ಪರರ ಮಿತಿಯ ಮೀರಿ ನಿಂತ ನಿನ್ನ ಸ್ವಂತ ಆತ್ಮ ಬಲವು,
ನಿನ್ನ ಬೇರು ಗಟ್ಟಿಯಿರಲು, ನಿನ್ನ ದ್ಟೃಷ್ಠಿ ದೂರವಿರಲು
ಮುಳ್ಳುಬಳ್ಳಿ ಕಳ್ಳಿ ನಿನಗೆ ದಾರಿ ಬಿಟ್ಟು ನಿಲುವುವು.

ಪೋಲಿ ಜನರು ಮುಂದೆ ಓಡಿ ಹಿಂದೆ ನೋಡಿ ನಕ್ಕರೆಂದು
ಸ್ಥೈರ್ಯ ಮರೆತು ಸೋತೆನೆಂದು ನೆಲದ ಮೇಲೆ ಉರುಳಬೇಡ,
ಹಿಂದೆ ಮುಂದೆ ಅಳತೆಯಿಂದ ನಡೆದ ಮಾರ್ಗ ಅರಿಯಲಾರೆ,
ಒಳಗೆ ನೋಡಿ ಗುರಿಯ ನೋಡು, ನಿನ್ನ ನಡಿಗೆ ನೀ ಅರಿಯುವೆ.

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success