ಹಕ್ಕಿ Poem by Praveen Kumar in Bhavana

ಹಕ್ಕಿ

ಆಕಾಶದೆತ್ತರಕೆ ತೇಲುತ್ತ, ಮೇಲೇರುತ್ತ
ಹಕ್ಕಿ ಹಾರುತ್ತಿದೆ, ನೋಡಿದೆಯ ಚೆಲುವೆ?
ತೊಡಕು ಕಂದರ, ಬೆಟ್ಟ, ದಿಟ್ಟ ಭೂಮಿಯ ಬಿಟ್ಟು
ನೀಲಕಿನ್ನರ ಲೋಕ, ಮಾಯಾನಗರಿಯ ಕಡೆಗೆ
ಹಕ್ಕಿ ಹಾರುತ್ತಿದೆ, ನೋಡಿದೆಯ ಚೆಲುವೆ?

ಭೂತಾಯ ತೋಳಸೆರೆ ಭಾರಬಂಧನ ಮರೆತು,
ಗೂಡಿನೊಳಗಿನ ಪುಟ್ಟ ಮೊಟ್ಟೆ ಮರಿಗಳ ಮರೆತು
ಹಕ್ಕಿ ಹಾರುತ್ತಿದೆ ದೂರ, ದೂರ, ಬಹುದೂರ,
ಕಂಡರಿಯದ ಕಡೆಗೆ, ಕನಸು ಕೊನರುವವರೆಗೆ,
ಹಕ್ಕಿ ಹಾರುತ್ತಿದೆ, ನೋಡಿದೆಯ ಚೆಲುವೆ?
ರೆಕ್ಕೆಪುಕ್ಕದ ಬಡಿತ, ದುಡಿತ, ಕಡಿತ ಹಕ್ಕಿ ಕಂಡಿಲ್ಲ,
ದಿಕ್ಕುದಕ್ಕದ ದಿಗಿಲು ನೆಗೆತ ಮುಗಿಲಲ್ಲಿ ಭುಗಿಲಾಗಿಲ್ಲ,
ಹಾರುತ್ತಿದೆ ಹಕ್ಕಿ, ತೇಲಿ, ಹಾರಿ, ಮೇಲೇರಿ,
ಹಕ್ಕಿ ಹಾರುತ್ತಿದೆ ದೂರ, ದೂರ, ಬಹುದೂರ,
ಹಕ್ಕಿ ಹಾರುತ್ತಿದೆ, ನೋಡಿದೆಯ ಚೆಲುವೆ?

Friday, April 29, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success