ಚಂದಮಾಮ Poem by PRAVEEN KUMAR Kannada Poems

ಚಂದಮಾಮ

ನೋಡು, ಚಂದ್ರ, ಎಷ್ಟು ಚಂದ,
ಮೂಡಲಿಂದ ಎದ್ದು ಬಂದ,
ಕತ್ತಲಿನಿಂದ ಮೂಡಿ ಬಂದ,
ಗಗನ ತುಂಬ ಚೆಲುವು ತಂದ.

ಮಕ್ಕಳೆಲ್ಲ ಬನ್ನಿ ಎಂದು,
ಚಂದಮಾಮ ಕರೆಯುತ್ತಿರುವ;
ಹಕ್ಕಿ ಹಾಗೆ ರೆಕ್ಕೆ ಬಡಿದು
ಮೇಲೆ ಮೇಲೆ ಬನ್ನಿ ಎನುವ.

ಗಾಳಿ ಮೇಲೆ ಹಾರಿ ಬನ್ನಿ,
ಮೋಡವೇರಿ ಕೂಡಿ ಬನ್ನಿ,
ಮಕ್ಕಳೆಲ್ಲ ಬಂದೆ ಬನ್ನಿ
ಎಂದು ಮಾಮ ಕರೆಯುತ್ತಿರುವ.

ಗಗನ ತುಂಬ ನಗುತಲಿರುವ
ಚಿಕ್ಕ ಪುಟ್ಟ ಚುಕ್ಕೆ ರಾಶಿ
ಮಧ್ಯೆ ನಿಮ್ಮನಿಡುವೆಯೆಂದು
ಪ್ರೀತಿ ತೋರಿ ನಗುತಲಿರುವ.

ಅಮ್ಮ, ಚಂದಮಾಮ ಬೇಕು,
ನಾವು ಅಲ್ಲಿ ಸೇರಬೇಕು,
ಚಂದಮಾಮ ಮಡಿಲಿನಲ್ಲಿ
ಲಾಲಿ ಹಾಡಿ ನಲಿಯಬೇಕು.

ತಕ್ಕ ತೈ, ತಕ್ಕ ತೈಯೆಂದು
ಆಕಾಶ ತುಂಬ ಹಾರಿ ಕುಣಿದು,
ಚಂದಮಾಮನೊಡನೆ ನಾವು
ಎಲ್ಲ ಲೋಕ ನೋಡಬೇಕು.

ನಮ್ಮ ಬಿಟ್ಟು ನಮ್ಮ ಮಾಮ
ಒಬ್ಬನೇಕೆ ದೂರವಿರುವ?
ಮನೆಯ ಮರೆತು ಆಕಾಶದಲ್ಲಿ
ಎಲ್ಲಿ ಮಾಮ ಓಡುತ್ತಿರುವ?

ಕತ್ತಲಲ್ಲಿ ಚಂದಮಾಮ
ಸಿಕ್ಕಿ ಪಾಪ ನಡುಗುತ್ತಿರುವ,
ತಾಯಿಯಿಲ್ಲ, ತಂದೆಯಿಲ್ಲ,
ಯಾಕೆ ಹೀಗೆ ಒಬ್ಬನಿರುವ?

ಅಮ್ಮ, ನೀನು ಕರೆದು ನೋಡು,
ಚಂದಮಾಮ ಬಂದೆ ಬರುವ,
ಬಡಿಗೆ ಹಿಡಿದು, ಸಿಟ್ಟುಗೊಂಡು,
ಕರೆದು ನೋಡು, ಓಡಿ ಬರುವ.

ಚಂದಮಾಮ ನಮ್ಮ ಮನೆಗೆ
ಚಂದ ತರುವ, ನಗುವ ತರುವ,
ನಮ್ಮ ಹಿಂದೆ ಹಿಂದೆ ಬಂದು
ಕತೆಯ ಹೇಳಿ ನಿದ್ರೆ ತರುವ.

Friday, April 29, 2016
Topic(s) of this poem: moon
COMMENTS OF THE POEM
READ THIS POEM IN OTHER LANGUAGES
Close
Error Success