ಬರೆಯುವಾಸೆ ಬಹಳವಿರಲು
ಯಾವ ವಸ್ತು, ಯಾವ ಭಾವ,
ಯಾವ ಜಾಗ, ಯಾವ ಕಾಲ,
ಯಾವ ಭಾಷೆ ಅದರೇನು?
ಬರೆಯುವಂತ ವಸ್ತು ಭಾವ
ಆತ್ಮದಾತ್ಮದಲ್ಲಿ ನಡೆವ
ತುಮುಲ ಯುದ್ಧ ಸ್ಟೃಕ್ರಯೆ
ಹೊತ್ತು ನಡೆವ ಕೀಲು ಕುದುರೆ.
ಜಾಗ, ಕಾಲ, ಭಾಷೆ ಕೂಡಿ
ಆಶೆಗೊಂದು ರೂಪು ನೀಡಿ
ಹೊರಗೆ ಹರಿದು ಬರುವ ಮೋಡಿ
ಕಾವ್ಯವಾಗಿ ಬಂತು ನೋಡಿ.
ಒಳಗಿನೊತ್ತು ಬಹಳಗೊಂಡು
ತಿಳಿಯದಂತ ನೋವು ಉಂಡು
ಸುಪ್ತ ವ್ಯಕ್ತಿ ವ್ಯಕ್ತಗೊಳ್ಳುವ
ವಿಮೋಚನೆಯೆ ಕಾವ್ಯ ಬರಹ.
ಅಂತರಾತ್ಮದಲ್ಲಿ ಕವಿದ
ಮೋಡರಾಶಿ ಬಡಿದು ಸಿಡಿದು
ಮಿಂಚು ಬಳ್ಳಿ ಪ್ರತಿಭೆ ಸ್ಪುರಣೆ
ತರುವ ಮಳೆಯೆ ಕಾವ್ಯಧಾರೆ.
ಬಿಗಿತದಿಂದ ಮುಕ್ತಗೊಳಲು
ಕುಗ್ಗಿಹೋದ ಮನಸು ಆತ್ಮ
ಹೊರಗೆ ಹಬ್ಬಿ ವಿರಳಗೊಂಡು
ಸಮತೆ ತರುವ ಕ್ರಿಯೆ ಕಾವ್ಯ.
ಬೆಳಕಿಗೊಂದು ದೀಪ ಬೇಕು,
ಚಂದಕ್ಕೊಂದು ರೂಪ ಬೇಕು,
ಆತ್ಮ ಕಂಡ ಸತ್ಯಕ್ಕೊಂದು
ವಸ್ತು, ಭಾವ ಬೇಕೆ ಬೇಕು.
ಆತ್ಮ, ಮನಸು, ಹೃದಯ ಕೂಡಿ
ಕಂಡ ದಿವ್ಯ ಚೆಲುವಿಗೊಂದು
ಜಾಗ ಕಾಲ, ಭಾಷೆ ಕಟ್ಟು
ಕೂಡಿದರೆನೆ ಕಾವ್ಯ ಬಂಧ.
ಕೀಲು ಕುದುರೆ ಹೇಗೆ ಇರಲಿ,
ಬೆನ್ನನೇರಿ ಜೀನು ಮೇಲೆ
ಕೂತ ಶೂರ ತಾನೆ ಮುಖ್ಯ,
ಅವನ ಲಕ್ಷ್ಯ ಕಾವ್ಯಸಖ್ಯ.
ಆಶೆನೋವು ಹೆಪ್ಪುಗೊಂಡು
ವಿವೇಕ ಪ್ರತಿಭೆ ಚಿಪ್ಪಿನಿಂದ
ವಜ್ರರತ್ನ ರೂಪದಲ್ಲಿ
ಕಾವ್ಯಹರಿದು ಬರಲೆ ಬೇಕು.
ಒಳಗೆ ಹೊಳಪು ಹಬ್ಬಿ ಕಾವ್ಯ
ಬಹಳ ಕಾಲ ಕಣ್ಣು ಮರೆಸಿ
ಹೊರಗೆ ಬರದೆ ಇರಲಸಾಧ್ಯ,
ತಾು ಹೊಟ್ಟೆ ತೆಳು ಕವಚ.
ಹೊರಗೆ ಬರದ ಕಾವ್ಯ ಪ್ರತಿಭೆ
ಸೂಜಿಯಂತೆ ಹೊಟ್ಟೆ ಚುಚ್ಚಿ
ಮನಸು ಕೆಡಿಸಿ, ಹೃದಯ ನುಡಿಸಿ
ಬೇಲಿ ಹರಿದು ಬರುವುದುಂಟು.
This poem has not been translated into any other language yet.
I would like to translate this poem