ಪಾತಾಳದಿ ಎದ್ದು ಆಕಾಶದ ಕೊನೆಗೆ,
ದಿಗಂತದಿ ಹೊರಟು ದಿಗಂತದವರೆಗೆ
ಇದಾವ ಗೋಡೆ ತಲೆಯೆತ್ತಿದೆ ಹೀಗೆ?
ಆ ಬದಿಯಿಂದ ಈ ಬದಿ ನಡುವೆ
ಯಾಕೀ ದೈತ್ಯ ಗೋಡೆಯ ಗೊಡವೆ?
ಕುದುರೆಯನೇರಿದ ವೀರ ಸರದಾರ
ನಾಗಾಲೋಟದಿ ಸವಾರಿಯ ತಂದು,
ಗೋಡೆಯ ಕಂಡು, ಕೈಲಾಗದೆ ನಿಂತು,
ಲಗಾಮನ್ನೆಳೆದು, ಕುದುರೆಯ ತಡೆದು,
ಬೆನ್ನನು ತಿರುಗಿಸಿ ಹಿನ್ನೆಡೆಯುವನು.
ಹಾರಾಟ, ಹೋರಾಟ, ಹೊಡೆದಾಟವು ಇಲ್ಲಿ,
ಕಣ್ಣು ಬೀಳುವವರೆಗೆ ಬರೆ ಬಂಜರು ಅಲ್ಲಿ,
ಅಂತರವಾದರೊ ಗೋಡೆಯ ಅಗಲ,
ವ್ಯತ್ಯಾಸದ ಕಂದರ, ಹುಟ್ಟು-ಸಾವಿನ ಅಗಲ,
ಗಾಳಿಯು ಬೀಸದು ಅತ್ತಿಂದಿತ್ತ,
ದೃಷ್ಠಿಯು ಏರದು ಆ ಗೋಡೆಯ ಎತ್ತರ,
ಮಾತು ಹಾರದು ಗೋಡೆಯ ಹಾದು;
ಇಲ್ಲಿದು ಇಲ್ಲಿ, ಅಲ್ಲಿದು ಅಲ್ಲಿ,
ನಡುವಲಿ ಭೇದಿಸಲಾಗದ ಭಿತ್ತಿ
ತಂದಿದೆ ನೋವು, ಅಪಜಯ ಭೀತಿ.
ಅಣೆಕಟ್ಟಿನ ಆಚೆ ಒಣ ಮರುಭೂಮಿ,
ಅಣೆಕಟ್ಟಿನ ಈಚೆ ಪ್ರವಾಹದ ಜೋರು,
ಅಣೆಕಟ್ಟನು ಒಡೆದು ಹರಿಯದು ನೀರು,
ಯಾಕೀ ಪಂಜರ, ಕೃತ್ರಿಮ ಕಟ್ಟು?
ನಿಸರ್ಗದ ನೇರಕೆ ಚಲಿಸದು ಯಾಕೆ?
ಗಲಿಬಿಲಿ ಗಡಿಬಿಡಿ ಬಿರುಗಾಳಿಯಲಿ
ಮಾತಿನ ಹಕ್ಕಿ ಹೊರ ಬಂದಾಗ,
ಪುಚ್ಚವು ಹರಿದು ನೆಲಕ್ಕುದುರುವುದು;
ಕರಾವಳಿ ತೊರೆಯುವ ಗಾಳಿಯ ತೇವ
ಬಯಲಲಿ ನಿರ್ಬಲವಾಗುವ ರೀತಿ
ಗೋಡೆಯ ದಾಟುವ ಭಾವ ಪರಿಸ್ಥಿತಿ.
ಒಳಗಿನ ಉಸಿರು ಹೊರಬಂದಾಗ
ಅಂತರ್ಯದ ಬಿಸಿ ಹೊರ ಹಬ್ಬಲೆ ಬೇಕು,
ಗದ್ದಲ, ದುಗುಡದ ಗಂಟಲು ದಾಟಿ
ಸ್ವರ ಸಂಜ್ಞೆಯನು ಅರ್ಥೈಸಲೆ ಬೇಕು;
ಅಸ್ತವ್ಯಸ್ತ ವಿಚಾರದ ಸಾವಿರ ಓಟ
ಪಂಕ್ತಿಯ ಹಿಡಿದು, ಶಿಸ್ತನು ತೋರಿ,
ಗೋಡೆಯ ಹಾರಿ, ಓಘವ ತೋರಿ,
ತನ್ನನ್ನು ಬಿಡಿ ಬಿಡಿ ಬಿಚ್ಚಲೆ ಬೇಕು;
ಯಾಕೀ ಅಡತಡೆ, ಭೀತಿಯ ಗೋಡೆ?
ಹಿಂದೆಕೆ ಎಳೆದು ತಡೆವುದು ನಡಿಗೆ?
ಯುಕ್ತಾಯುಕ್ತ ವಿವೇಕದ ಓಟ,
ಸಿಂಹದ ಘರ್ಜನೆ, ಸಿಡಿಮದ್ದಿನ ಸ್ಪೊಟ;
ಪ್ರೀತಿ ವಿಶ್ವಾಸದ, ಹೃದಯದ ಬಡಿತ
ಮೈ ಸವರುವ ಹಿತದ ವಿನಮ್ರ ಕಡಿತ;
ಒಂದೊಂದನು ಮಿಂಚಿಸಿ, ತಡೆಯನು ಜಿಗಿದು,
ಅಲ್ಲಿಂದಿತ್ತ, ಇಲ್ಲಿಂದತ್ತ
ಮಾತಿನ ಬೆನ್ನಲಿ ಹಾರುವ ಛಲವು
ಒಳಗಿನ ಹೊರಗಿನ ಸಮಗ್ರ ಚೆಲುವು;
ಕಣ್ಣಿಗೆ ಕಾಣದ ದೈತ್ಯ ಗೋಡೆಯ ಕೆಡವಿ
ಕಟ್ಟಿರಿ ಸೇತುವೆ ಒಳಗೆ ಹೊರಗೆ.
This poem has not been translated into any other language yet.
I would like to translate this poem