ಶಿಸ್ತು Poem by PRAVEEN KUMAR Kannada Poems

ಶಿಸ್ತು

ಶಿಸ್ತು ಅಂತರಾಳದ ವಸ್ತು,
ಸ್ವೇಚ್ಛೆಯ ಹಿಡಿದಿಡುವ ಪ್ರಜ್ಞೆಯ ಗಸ್ತು

ಭಾವ ಚಿಂತನೆ ಮತಿಸಿ ಹಾರುವ
ವಿದ್ಯುತ್ತಿನ ಬಿಸಿ ಕಿಡಿ ಶಿಸ್ತು,
ಅಂತರಾಳದಿ ಉಕ್ಕಿ ಹರಿಯುವ
ಪರಿಪಕ್ವ ಪ್ರಕ್ರಿಯೆ ಶಿಸ್ತು.

ಅಸ್ತು ಅಸ್ತು ಎಂದು ಬೇಸ್ತು ಬೀಳುವುದಲ್ಲ ಶಿಸ್ತು;
ಶಿಸ್ತು ಲೇಸರ್ ಕಿರಣದಂತಹ ಶಸ್ತ್ರ ಹರಿತದ ವಸ್ತು;
ಒಳಗೊಳಗೆ ಕುದಿದು ಸರಿ ಹದದಲಿ ಬೆಂದು,
ಸ್ಪಂದಿಸುವ ಮಿಂಚು ಪ್ರವೃತ್ತಿ ಒಳಗೆ ನಿಂದು,
ದೇಹ ಮನಸು ಆತ್ಮ ಮುಪ್ಪುರಿಗೊಂಡು
ಜೀವ ನಡೆಯುವ ದಾರಿ, ಚೌಕಟ್ಟು ಶಿಸ್ತು.

ಶಿಸ್ತು ಆತ್ಮಸ್ಥೈರ್ಯದ ಪ್ರಕ್ರಿಯೆ,
ಕಸ್ತೂರಿ ಸೌಗಂಧ,
ಪಳಗಿದ ಜೀವದ ಕ್ರಿಯೆ,
ಬೌದ್ಧಿಕ ನಿಷ್ಠೆಯ ಸುಂದರ ಬಂಧ.

ಶಿಸ್ತು ನಿಶ್ಚಿತ ಮಾತ್ರೆಯ ಸುಂದರ ಕಾವ್ಯ,
ಸುಸ್ಪಷ್ಟ, ನಿರರ್ಗಳ, ಮನೋಹರ, ದಿವ್ಯ

ಶಿಸ್ತು ಸಂವೇದನೆಯ ಕಾಗುಣಿತದ ಬಂಧ,
ಸಂಗೀತ ಸ್ಪಂದಿಸುವ ಹಾವ ಭಾವ,
ರೂಪ ನಿರೂಪಿಸುವ ಎಲುಬಿನ ಹಂದರ,
ಆತ್ಮ ಸಂಚಲನೆಯ ಸುಯೋಜಿತ ಕಂದರ.

ಶಿಸ್ತು ಸಬಲರ ಸಕ್ರಮ ನಡತೆ,
ಹುಲಿ ಮೊಲೆ ಹಿಂಡುವ ಕಾರ್ಯ ತತ್ಪರತೆ;
ಒಳಗಡೆ ಇಳಿದು, ಒಳಗಿಂದೇಳುವ,
ಚಿಗುರುವ ಮರದ ವಿಶ್ವಾಸ ಪ್ರಕ್ರಿಯೆ;
ಇದು ಮನೋಸಾಗರದ ಪ್ರವಾಹವಲ್ಲ,
ಸಾಗರದೊಳಗಿನ ಸಾಂದ್ರ ಭಂಡಾರ.
ಶಿಸ್ತು ಇದ್ದಲ್ಲೆಲ್ಲೂ ಅನಿಶ್ಚಿತತೆ ಇಲ್ಲ,
ಶಿಸ್ತು ಇದ್ದವ ಸರ ದಾರಿಯ ಬಲ್ಲ,
ಶಿಸ್ತು ವಿಶ್ವಾಸ, ಶಿಸ್ತು ಸ್ಥೈರ್ಯ,
ಜೀವನದುದ್ದ ಕೈ ಹಿಡಿವ ಐಶ್ವರ್ಯ.

ತನ್ನನು ಗೆದ್ದವ ಶಿಸ್ತನು ಗೆಲ್ಲುವ,
ಶಿಸ್ತನು ಗೆದ್ದವ ಜಗತ್ತನ್ನೆ ಗೆಲ್ಲುವ

COMMENTS OF THE POEM
READ THIS POEM IN OTHER LANGUAGES
Close
Error Success