ಸಂಜೆ Poem by Praveen Kumar in Bhavana

ಸಂಜೆ

ದಿನವಿಡಿ ಬೆಳಕಿನಲಿ ಮಿಂದು ಬಳಲಿದ ಸಂಜೆ
ಸುಖಸ್ವಪ್ನದ ಸಕ್ಕರೆಸವಿ ನಿದ್ರೆಯ ಹಿತ ಮಬ್ಬಿನಲಿ
ಶಯ್ಯೆಯಲಿ ಕಾದಿರುವ ಪ್ರಿಯತಮನ ನೆನಪಿನಲಿ
ನಾಚುಕೆಗೊಂಡು ಕೆಂಪೇರಿ, ಬಿಗಿಯಪ್ಪುಗೆ ಬಯಸುತ್ತ
ಮಬ್ಬುಗತ್ತಲು ಬೆರೆ ಶಯನಗೃಹ ಸೇರಿದಳು.
ಪ್ರಖರ ಬೆಳಕಿನ ಹೊದಿಕೆ ಕತ್ತಲಿನ ಪ್ರವಾಹದಲಿ,
ಕೊಚ್ಚಿ ಹೋಗುತ್ತಲೆ ಕೆಂಪು ಪೆಂಪು ಹೆಪ್ಪುಗಟ್ಟಿದುವು,
ಬಳಲಿರುವಭುವಿ ಮೇಲೆ ಸಿಹಿ ಮಂದ ಮತ್ತನು ತಂದು,
ರಂಗೇರಿದ ಗಗನ ತುಂಬ ಬೆಳ್ಳಿ ಚುಕ್ಕಿಗಳ ತಂದು,
ಹಕ್ಕಿಗಳ ಚಿಲಿಪಿಲಿಯಲ್ಲಿ, ದಿನ ಮೈಮರೆಯುವನು.

ಆತುರ ಕಾತುರದಲ್ಲಿ ಬೀಗಿರುವ ರಸಸಂಜೆ,
ದೂರದಿಗಂತದ ತುಂಬ ತಂಬೆಲರನ್ನು ತೀಡುತ್ತಿದೆ;
ಗೂಡು ಸೇರುವುದೆಂಬ ಆರಾಮ ಬಯಕೆಯ ತುಂಬಿ,
ಮೈಕೈ ಸಕ್ಕರೆಯಾಗಿ ಮುದ ಮನಸು ತುಂಬುತ್ತಿದೆ,
ರಂಗೇರಿದ ಸುಖನಗರಿಯ ಹೊಸಲೋಕಕ್ಕೆ ತರುತಲಿದೆ.

ದಿನವಿಡಿ ಪಡುವಣದತ್ತ ದೌಡುಸಿ ದಿನರಾಜ,
ಮರೆಯಾಗುವ ಮುನ್ನ ನಡೆದಾಡಿದ ದಾರಿಯನು,
ಹಿಂತಿರುಗಿ ನೋಡುತ್ತ ತೃಪ್ತಿನಗೆ ಚೆಲ್ಲಿರುವ;
ಕಾವೇರಿದ್ದ ಭೂಲೋಕ ಹಿತತಂಪಿನ ನೆರಳಿನಲಿ,
ಕತ್ತಲ ದಟ್ಟ ಕಡಲಿನಲಿ ಮೈಮರೆತು ಮುಳುಗಿದಳು.

Friday, April 29, 2016
Topic(s) of this poem: evening
COMMENTS OF THE POEM
READ THIS POEM IN OTHER LANGUAGES
Close
Error Success