ಜೀವನ ಯಾನ Poem by PRAVEEN KUMAR Kannada Poems

ಜೀವನ ಯಾನ

ದಿನದಿಂದಿನಕೆ ತೆರೆಯಿಂತೆರೆಗೆ
ಹಾರುತ ಸಾಗಿದೆ ಜೀವನ ನಾವೆ,
ಪಯಣದ ರಭಸಕೆ, ಗಾಳಿಯ ಒದೆತಕೆ
ದಿಕ್ಕನು ಮರೆತಿದೆ ನಾವೆಯ ಹಾಯಿ.

ಮೇಲಕೆ ಏರಿ, ಪ್ರಪಾತಕೆ ಜಾರಿ,
ಎಡಬಲ ಸುತ್ತಿ, ತಿರ್ರನೆ ತಿರುಗಿ,
ಪಯಣದ ಉದ್ದ ನಾವೆಯು ಸಾಗಿದೆ
ಅರಡಿ ದೂರದ ದಾರಿಯ ನೇರ.

ಈ ಜೀವನ ಯಾನಕೆ ಕೊನೆಯೊಂದುಂಟೆ,
ಆದ್ಯಂತಜ್ಞಾತ, ಕತ್ತಲೆ ಸುತ್ತ;
ದಿಕ್ಕುದಾರಿಯ ಪರಿವೆಯ ಮರೆತು
ಜೀವನಯಾನ ಸಾಗಿದೆ ಮುಂದೆ.

ಅಸಂಗತ ಸಂಧಿ ತಿರುವುಗಳು ಬೆರೆತು,
ಕಾಲದ ಸೆಜ್ಜೆಗೆ ಮೈಯನು ಚಾಚಿ
ಪ್ರಕೃತಿಯೊದೆತಕೆ ತತ್ತರಿಸಿದ ಯಾನಕೆ
ದಡಸೇರುವ ಆಶೆ ಮರೀಚಿಕೆಯಾಗಿದೆ.

ಬಂದೆನೆಲ್ಲಿಂದ, ಇನ್ನೆಲ್ಲಿಗೆ ಯಾನ?
ಜೀವನ ದಾರಿ ಕಗ್ಗತ್ತಲ ಸೇರಿ,
ಗಾಳಿಯ ರಭಸದ ದಿಕ್ಕಿಗೆ ಬಾಗಿ
ಅಜ್ಞಾತದ ತೀರಕೆ ಸಾಗಿದೆ ನಾವೆ.

Saturday, April 30, 2016
Topic(s) of this poem: life
COMMENTS OF THE POEM
READ THIS POEM IN OTHER LANGUAGES
Close
Error Success