ಬಸವ ತತ್ವ Poem by Praveen Kumar in Bhavana

ಬಸವ ತತ್ವ

ಹೂವು ಹಣ್ಣನ್ನು ಕಾಗದದಲ್ಲಿ ಸುತ್ತಿಡಬಹುದು,
ಚಿನ್ನಾಭರಣವ ಕಾಗದದಲ್ಲಿ ಸುತ್ತಿಡಬಹುದು,
ಬೆಂಕಿಯನು ಕಾಗದದಲ್ಲಿ ಸುತ್ತಿಡಲಾಗುವುದೆ?
ಬಸವಣ್ಣನ ತತ್ವ ಸಮ್ಟಸ್ಠೃಯ ಜೀವವಾಗಿರುವಾಗ,
ಬಸವಣ್ಣನ ತತ್ವ ಜೀವಜೀವಗಳ ಮೌಲ್ಯವಾಗಿರುವಾಗ,
ಕಾರ್ಯಕಾರಣ ಕೊಂಡಿ ಬೆಸೆವ ಬೆಂಕಿಯಾಗಿರುವಾಗ,
ಶಿವಭಕ್ತನಾಗದ ವಿನಹ, ಶರಣರಿಗೆ ಶರಣಾಗದ ವಿನಹ,
ಶಿವಲಿಂಗವನು ಮೈಮನದಾಳದಲಿ ಧರಿಸದ ವಿನಹ
ಚಿತ್ತವೆಂಬ ಅತ್ತಿಯ ಹುರುಳಿಲ್ಲದ ಹಣ್ಣಿನ ಕಾಗದದಿಂದ
ಬಸವ ತತ್ವದ ಸಮ್ಟ ಬೆಂಕಿಯನು ಸುತ್ತಿಡಲಾಗುವುದೆ?

ಮೇಲುಕೀಳೆಂಬ ನೆಯ್ಗೆಯ ಅರಿವೆಯ ಕಿತ್ತೊಗೆದು
ಬಯಲುಗೊಂಡವನೆ ನಮ್ಮ ಗುರು ಬಸವಣ್ಣ;
ಶಿವನೆ ಸತ್ಯ, ಶಿವಲಿಂಗ ಸ್ತುತ್ಯ, ಶಿವಶರಣ ನಿತ್ಯ
ತತ್ವಾಮೃತದ ಸಮಭಾವ ಬಿತ್ತರಿಸಿದ ಗುರುದೇವ,
ತತ್ವದಲೆ ಮಿಂದು, ಹರಿದು, ತತ್ವಕ್ಕೆ ತನ್ನ ಬಲಿಯಿಟ್ಟು,
ಕಾಯಕದಲೆ ಕೈಲಾಸ ಧರೆಗಿಳಿಸಿದ ಮಹಾ ಸಿದ್ಧ
ಹರಿದು ಹಂಚಾಗಿದ್ದ ಲೋಕಕ್ಕೆ ಹೊಸದಾರಿ ಕೊಟ್ಟ,
ಕತ್ತಲಡರಿದ್ದ ಜಗಕ್ಕೆ ತತ್ವ ಬೆಳಕನು ಕೊಟ್ಟ;
ತನ್ನತನ ಹರಿದು, ಮಾಯಾಮೋಹದ ಬಲೆ ಬಗೆದು,
ತನ್ನೊಳಗಡಗಿದ್ದ ಬೆಳಕಿಂದ ಜಗತ್ತೆಲ್ಲ ಬೆಳಗಿಸಿದ.

ಬಸವ ಸಾರಿದ ತತ್ವ, ಬಸವ ಸಾರಿದ ಮಂತ್ರ
ಬರೆ ನಿಮ್ಮನಮ್ಮದಲ್ಲ, ಪೂರ್ವಪಶ್ಚಿಮ ದ್ವಂದ್ವದಲ್ಲ,
ಕಾಲಸ್ಥಳದ ವರ್ತುಲ ಮೀರಿನಿಂತ ಲೋಕಸತ್ಯ,
ನಿನ್ನೆನಾಳೆಯ ದ್ವಂದ್ವ ಮೀರಿದ ನಿತ್ಯ ಸತ್ಯ;
ಬಸವ ಅವರಿವರ, ಒಬ್ಬರ ಸೊತ್ತಲ್ಲ, ಲೋಕದೊಡೆಯ,
ಬಸವತತ್ವ ಜಾತಿಧರ್ಮ ನೀತಿಯಲ್ಲ, ಲೋಕಧರ್ಮದ ಸತ್ಯ,
ಅಸ್ಥಿತ್ವದ ಶಕ್ತಿ, ಲೋಕ ವಿಕಸನದ ಮೂಲ ಚೈತನ್ಯ;
ನಿಸ್ಪ್ರಹ ನಿಸ್ವಾರ್ಥ ಗುರು ಬಸವಣ್ಣ ತೋರಿದ ದೀಪ
ಸೂರ್ಯ ಬೆಳಕಿನ ರೀತಿ ಉದಯಾಸ್ತಕ್ಕೆ ಬಾಧ್ಯವಲ್ಲ,
ಸದಾ ಬೆಳಕಲ್ಲಿ ದಾರಿತೋರುವ ಸತ್ಯ ನಂದಾದೀಪ.

Saturday, April 30, 2016
Topic(s) of this poem: philosophy
COMMENTS OF THE POEM
READ THIS POEM IN OTHER LANGUAGES
Close
Error Success