ಮಳೆ, ನದಿ, ದಟ್ಟ ಕಾಡು
ಹುಟ್ಟಿಸಿದ ದಾತ ನೀನು,
ರಣ ರಣ ಬಿಸಿಲು ಕೊಟ್ಟು
ಮರುಭೂಮಿ ಜೊತೆಗೆ ಇಟ್ಟೆ.
ಮೃಗ ಮರ ಕಾಡಿಗಿತ್ತು,
ಕಲ್ಲೆಣ್ಣೆ ಮರುಭೂಮಿಗಿತ್ತು
ಕೊಟ್ಟುಪಡೆಯಿರೆಂದು ಸಾರಿ
ಸಹಜೀವನ ಕಲಿಸಿಕೊಟ್ಟೆ.
ಐಷ್ಟೈಶ್ವರ್ಯ ಕೊಟ್ಟು,
ಹಸಿವು ಕೊರತೆ ಜೊತೆಗೆಯಿಟ್ಟು,
ಬದುಕಿನರ್ಥ ಕಲಿಯಿರೆಂಬ
ಸತ್ಯಸ್ಥಿತಿ ಸಂದೇಶ ಕೊಟ್ಟೆ.
ಮೌಢ್ಯ ಜಾಣ್ಮೆ ಜೊತೆಯಲ್ಲಿಟ್ಟು,
ಪ್ರೀತಿ ದ್ವೇಷ ಒತ್ತೊತ್ತಿಗಿಟ್ಟು,
ಎಲ್ಲ ಬಳಸಿ ನಡೆಯಿರೆಂದು
ನಮ್ಮನ್ನೆಲ್ಲ ಮುಂದೆ ಬಿಟ್ಟೆ.
ನೀನಲ್ಲೂ ಇರುವೆ, ಇಲ್ಲೂ ಇರುವೆ,
ಅದು ಇದು ಸಮವು ನಿನಗೆ,
ಲೋಕ ನಡೆಸುವ ಸಾಧನ,
ಸಮತೋಲನ ವೈವಿಧ್ಯವು.
ಯಾರು ನೀನು, ಹೇಗಿರುವೆ,
ತಿಳಿದವರು ಎಲ್ಲೂ ಇಲ್ಲ,
ಅಣು ಅಣು ವಿಶ್ವದಗಲ
ನೀನು ಒಬ್ಬನೆ ತೋರುವೆ.
ನೀನಿಟ್ಟ ಲೋಕ ಸ್ಥಿತಿಯ ಕಲಿತು,
ಹಿಂದೆ ಮುಂದೆ ನೋಡಿ ನಡೆದರೆ
ಅದೇ ನಮ್ಮ ಕೃತಾರ್ಥತೆ,
ನಿನಗೆ ನಮ್ಮ ಕೃತಜ್ಞತೆ.
ನಮ್ಮ ಎಲ್ಲೆ ಮೀರಿದವನು,
ನಮ್ಮ ಪ್ರಜ್ಞೆಗೆ ಅತೀತನು,
ನೀನಿಟ್ಟ ಈ ಲೋಕವರಿತು
ನಿನ್ನ ತಿಳಿವುದೆ ಮಾರ್ಗವು.
ಸತ್ಯಸತ್ಯ ಪಾಪ ಪುಣ್ಯ
ನಮ್ಮಜ್ಞಾನದ ಪ್ರತೀಕವು,
ನೀನಿಟ್ಟ ಲೋಕ, ನೀನು ಮಾತ್ರ
ನಮ್ಮ ಪ್ರಜ್ಞೆ ಸಂದೀಪನ.
This poem has not been translated into any other language yet.
I would like to translate this poem