ನಾವು ನೀವಿರುವ ಲೋಕ ದೊಡ್ಡ ಸರ್ಕಸ್ಸು,
ನಾವಾಡುವ ಭೂಮಿ ಸರ್ಕಸ್ಸು ಮೈದಾನ;
ಇಲ್ಲಿಲ್ಲದ ಪ್ರಾಣಿ ಜೀವಜಂತುಗಳಿಲ್ಲ,
ಎಲ್ಲವನಾಡಿಸುವವನೆ ರಂಗ ಮಾಲಿಕ, ವಿಧಿ;
ಹುಲಿ ಸಿಂಹವಿರಲಿ, ಆನೆ ಕುದುರೆ ಕರಡಿಯಿರಲಿ,
ನಾವೇನೇಯಿರಲಿ, ಬಂಧಿಗಳು ನಾವು,
ರಂಗ ಮಾಲಿಕನಾಡಿಸಿದಂತೆ ಕುಣಿಯಬೇಕು,
ನಮ್ಮತನ ಮರೆತು ಸರ್ಕಸ್ಸು ಮಾಡಬೇಕು,
ತಪ್ಪಿದರೆ ಛಡಿಯೇಟು ನೋವು ತಪ್ಪಿದಲ್ಲ;
ಯಾಕೆ ಹೇಗೆ ಹೀಗೆ ಸರಿತಪ್ಪು ಲೆಕ್ಕವಿಲ್ಲಿಲ್ಲ,
ರಂಗ ಮಾಲಿಕ ವಿಧಿಸಿದ್ದೆ ವಿಧಿ, ಕಲಿಸಿದ್ದೆ ಸರಿ,
ಕೊಟ್ಟ ಕೋಷ್ಠದಲ್ಲಡಗಿ ಸರ್ಕಸ್ಸು ಮಾಡಬೇಕು,
ತೂಗುಯ್ಯಾಲೆಯಲಿ ಒಂದರಿಂದೊಂದಕ್ಕೆ ಜಿಗಿದು
ರಂಗ ಮಾಲಿಕನಿಂದ ಭೇಷ್ ಗಳಿಸಿಕೊಳ್ಳ ಬೇಕು.
ಇದೊಂದು ದೊಡ್ಡ ಹುಚ್ಚಾಸ್ಪತ್ರೆ, ರಣರಂಗ,
ಕಾರ್ಯಕಾರಣ ವಿಹೀನ ಕಾದಾಟ ಸಾಮಾನ್ಯವಿಲ್ಲಿ;
ಏನೋ ಭ್ರಮೆ, ಏನೋ ಭ್ರಾಂತಿ, ಪೈಪೋಟಿ, ದ್ವೇಶ,
ಎದುರಿದ್ದವರ ಮೇಲೆ ಹರಿಹಾಯುವ ಮನೋವೃತ್ತಿ,
ಇದು ಹುಚ್ಚಾಸ್ಪತ್ರೆಯೋ, ರಣರಂಗವೋ, ಹೇಳುವುದು ಕಷ್ಟ;
ಎಲ್ಲಿ ಯಾವಾಗ ಏನು ನಡೆಯುವುದೋ ಹೇಳುವವರಿಲ್ಲ,
ಯಾಕೆ ಹೀಗಾಯಿತೆಂಬ ಜಾಡು ಸಿಕ್ಕುವುದಿಲ್ಲ;
ಕೆಳಗಿದ್ದುದು ಮೇಲೆ, ಮೇಲಿದ್ದದು ಕೆಳಗೆ, ಅಶಿಸ್ತು,
ಉದ್ದಗಲ ನೂಕುನುಗ್ಗಲು, ಆಯೋಜಿತ ಸಂಚಲನ,
ಹತೋಟಿ ನಿರ್ಬಂಧಕ್ಕೆ ಕಿಂಚಿತ್ತೂ ಬೆಲೆ ಇಲ್ಲಿಲ್ಲ,
ಕೈಗೆಟಕಿದುದೆ ಸ್ವಾಮ್ಯ, ಭ್ರಮಿಸಿದುದೆ ಸತ್ಯ,
ಅನುಗತ ಪರಿಣಾಮದ ಗೊಡವೆ ಸ್ವಲ್ಪವೂಯಿಲ್ಲ,
ನಾಳೆನಾಡದ್ದಿನ ಚಿಂತೆ, ದೂರ ಕಣ್ಣೋಡಿಸುವ ಕ್ಷಮತೆ
ಬರದ ಹುಚ್ಚಾಸ್ಪತ್ರೆ ರಣರಂಗ ನಾವಿರುವ ಲೋಕ.
This poem has not been translated into any other language yet.
I would like to translate this poem