ನೀನು ನನ್ನವಳೆಂದು, ನಾನು ನಿನ್ನವನೆಂದು
ನಿನ್ನ ನನ್ನ ಹೃದಯ ಆತ್ಮಗಳು ಸಾರುತ್ತಿರುವಾಗ
ಅವರಿವರ ಹೊರ ಜಗತ್ತಿನ ಹಂಗೇಕೆ ನಮಗೆ?
ನೀನು ನನ್ನಲ್ಲಿ, ನಾನು ನಿನ್ನಲ್ಲಿ ಹುದುಗಿರುವಾಗ
ನಮ್ಮ ನಮ್ಮಲ್ಲೆ ಜೀವನದ ಧ್ಯೇಯ ಕಂಡಿರುವಾಗ,
ವಿಧಿ ವಿಧಾನ ನ್ಯಾಯಾನ್ಯಾಯದ ಗೊಡವೆ ಬೇಕೆ?
ಪ್ರಕೃತಿಯ ನಿಬಂಧನಾನುಸಾರ ಒಂದಾದವರು ನಾವು,
ಪ್ರಕೃತಿಯ ದಿವ್ಯ ಹಸ್ತ ಹೊಸೆದು ಹೆಣೆದಂತೆ ಬೆಸೆದವರು,
ಕೃತಕ ಸ್ವಾರ್ಥ ಯುಕ್ತಿನಿಯುಕ್ತಿ ದೋಷಪೀಡನೆ ಇಲ್ಲಿಲ್ಲ;
ನಾವು ನಾವೇ ಲಕ್ಷ್ಯಗಳು, ನಮ್ಮ ಮೀರಿದ ಧ್ಯೇಯ ನಮಗಿಲ್ಲ,
ಬೇರೊಂದು ಸಾಧನೆಯ ಸಾಧಕ ವಾಹಕಗಳಲ್ಲ ನಾವು,
ನಮ್ಮ ನಮ್ಮಲ್ಲೆ ಜೀವನದ ಸಂತೃಪ್ತಿ ಸಾರ್ಥಕ್ಯ ಕಾಣುವವರು.
ಅಸ್ಥಿರತೆಯ ರೈಲುಕಂಬಿಯ ಗುಂಟ ಓಡುವ ಲೋಕಕ್ಕೆ
ನಿನ್ನ ನನ್ನ ನಮ್ಮ ಸ್ಥಿರತೆ ಬಿಡಿಸಲಾಗದ ಗಂಟು, ಗುಟ್ಟು,
ಕಾಲಾಧಿಪತ್ಯ ಮೀರಿ ಹರಿಯುವ ಹಿರಿಯ ವಿಸ್ಮಯ ಪ್ರಪಾತ;
ಪ್ರಪಂಚ ಹೇಗೇ ಇರಲಿ, ನಮ್ಮನಮ್ಮಲ್ಲೆ ಹುದುಗಿರುವ ನಮಗೆ,
ಜೊತೆಜೊತೆಗೆ ಕಾಲದ ಕೊನೆಗೆ ಬಿಡದೆ ನಡೆಯುವ ನಮಗೆ,
ನಿನಗೆ, ನನಗೆ, ನಾವೇ ಅರ್ಥ, ಜೀವನಾರ್ಥ, ಸತ್ಯ, ಸಾರ್ಥಕ್ಯ.
ನೀನೆಲ್ಲಿದ್ದರೂ ನನಗೆ ಬಿಡದೆ ನಿನ್ನದೇ ನೆನಪು, ಚಿಂತೆ,
ನಾನೆಲ್ಲಿದ್ದರೂ ಸದಾ ನನ್ನ ಗೊಡವೆಯಲ್ಲಿರುವೆ ನೀನು,
ಬೆಂಬಿಡದ ಬಂಧನದ ದಿವ್ಯ ಭವ್ಯ ಬಂಧಿಗಳು ನಾವು;
ಬಂಧನದ ದಿವ್ಯ ಸುಖ ಹುಲು ಸ್ವಾತಂತ್ರ್ಯಕ್ಕೇನು ಗೊತ್ತು?
ಸ್ವಾರ್ಥ ಬಸಿದು ಬೆಸೆಯುವ ನಮ್ಮ ತೃಪ್ತಿ ಸಾಮನ್ಯವೇನು?
ಇದು ನಿನ್ನ ನನ್ನ ಬಾಂಧವ್ಯದ ದಿವ್ಯ ಗಂಗೋತ್ರಿ ತಾನೇ.
This poem has not been translated into any other language yet.
I would like to translate this poem