ನೀನಾರೋ ನಾನಾರೋ, ನಾವೆಲ್ಲಿಂದ ಬಂದೆವೋ,
ಅದಾವ ಕಾಲಗರ್ಭದ ಕಾರ್ಯಕಾರಣ ಕವಲೊಡೆದು
ನಿನ್ನನನ್ನನಿಲ್ಲಿ ಅದಾವ ದಿವ್ಯ ಬಿಗಿತದಲಿ ಬಂಧಿಸಿತೋ.
ಬಲೆಯಲಿ ಬಿದ್ದ ಮೀನಿನಂತೆ ಚಡಪಡಿಸುವ ನಾವು
ದಿನಕಳೆದಂತೆ ಬಲೆಯ ಬಿಡದ ಹಿಡಿತದಲ್ಲಿ ನಲುಗಿ
ನಮ್ಮಿರವನ್ನು ಇಹಪರವನ್ನು ಮರೆತು ಕೈಚೆಲ್ಲಿ ನಿಂತೆವು.
ಮುಂದೆ ಹೋಗುವ ಹಾಗೂ ಇಲ್ಲ, ಹಿಂದೆ ನೋಡುವಂತಿಲ್ಲ,
ತ್ರಿಶಂಕುವಂತೆ ಇದ್ದಲ್ಲೆ ನಾವು ಕೈಚೆಲ್ಲಿ ನಿಂತಿರುವಾಗ,
ಈ ನೋವು ನಿರಾಶೆ ಪರಾಭವದ ಅಳ ತಿಳಿದವನೇ ಬಲ್ಲ.
ಆಕಾಶದೆತ್ತರಕೆ ನಿಂತು ನಮ್ಮ ತಡೆಯುವ ಗೋಡೆ ಮುಂದೆ,
ಸಪ್ತಸಾಗರಗಳೊಂದಾಗಿ ಹಬ್ಬಿ ತಡೆಯುವ ದೂರ ಹಿಂದೆ,
ಮುಂದೆ ನಡೆಯುವಂತಿಲ್ಲ, ಹಿಂದೆ ಹೋಗುವ ಮಾತೇ ಇಲ್ಲ.
ಇದ್ದಲ್ಲೇ ಇದ್ದು, ಜೊತೆ ಇದ್ದು, ವಿರಹದ ಬೆಂಕಿಯಲ್ಲಿ
ಜೀವಂತ ಸುಡುವ ಇದು ಸಾಮಾನ್ಯ ನೋವು ದುಃಖವಲ್ಲ,
ಸಹಿಸುವಂತಿಲ್ಲ, ಸಹಿಸದೆ ಇರುವಂತಿಲ್ಲ ನಮ್ಮ ದುಸ್ಥಿತಿ.
ಜೊತೆಗಿದ್ದೂ ನಿನಗೆ ನೆಮ್ಮದಿ ನಾನು ತರುವ ಹಾಗಿಲ್ಲ,
ನಿನ್ನ ಕಣ್ಣೀರನೊರೆಸುವ ನೆಮ್ಮದಿ ಕಾಣುವಂತಿಲ್ಲ ನಾನು,
ನಿನ್ನ ನೋವು ದಿನಾದಿನ ಕಂಡು ಕಂಡು ನಾನು ಮರುಗಬೇಕು.
ಇನ್ನೆಷ್ಟು ದಿನ ಕಾಲವೀ ಬೆಂಬಿಡದ ನೋವು ನಕ್ಷತ್ರಿಕ
ನಮ್ಮಿಬ್ಬರ ನಡುವೆ ಪ್ರೇತಭೇತಾಳವಾಗಿ ಎದೆಯುಬ್ಬಿಸಿ ನಿಂತು
ಕಾಲಚಕ್ರದಲ್ಲರೆದು ಅರೆದು ನಮ್ಮ ಬೆಂಡೇಳಿಸುವುದೋ.
ಕಾಲಬಲೆಯಲಿ ತಡಪಡಿಸುವ ನಮಗೆ ಪರಿಹಾರ ಬೇಕು,
ಬಲೆಯನ್ನು ಹರಿಹರಿದು ನಾವು ಹೊರಬರಲೆ ಬೇಕು,
ಮತ್ತೆ ನಿರ್ಬಂಧರಾಗಿ ಕೂಡಿ ಸೇರಿ ಲೋಕ ಮರೆಯಬೇಕು.
ಇದು ನಮ್ಮ ಕನಸು; ಕನಸು ನಮಗೆ ನೆನಸಾಗಬೇಕು,
ಅಸ್ಥಿರತೆಯ ಅಲೆಯಲ್ಲೇ ಜಿಗಿದು ಹರಿಯುವ ಪ್ರಪಂಚದಲಿ
ಒಂದಲ್ಲ ಒಂದು ದಿನ ನಮ್ಮ ಕನಸು ನೆನಸಗುವುದು ದಿಟ.
ಭರವಸೆಯ ಪಂಜಿನ ಬೆಳಕಿನಲಿ ನಡೆಯುವ ನಾವು
ದಿನದಿನದ ದಾರುಣ ನೋವನ್ನು ಮರೆತು ಹೇಗೋ ಕಾದು,
ಕಾಲಗುಂಟ ನಡೆದು ಸೇರುವೆವು ನಮ್ಮ ದಿವ್ಯ ಲಕ್ಷ್ಯ.
This poem has not been translated into any other language yet.
I would like to translate this poem