ನೆನಪಿನ ದೋಣಿಗೆ ಹಾಯಿಯ ಕಟ್ಟಿ
ಗತಕಾಲದ ತಟವನು ಸೇರುವ ಆಸೆ,
ಸಾಂಪ್ರತ - ಗತಿಸಿದ ದಿನಗಳ ಮಧ್ಯೆ
ನೆನಪಿನ ಸೇತುವೆ ಕಟ್ಟುವ ಆಸೆ.
ವಿಸ್ಮ್ರತಿ ನದಿಯ ಆಚೆಯ ದಡದಲಿ,
ಚಿನ್ನದ ಬಣ್ಣದ ಪ್ರಭಾವಳಿ ಮಧ್ಯೆ
ವಜ್ರ ವೈಢೂರ್ಯದ ಸಿಂಹಾಸನದಲ್ಲಿ
ಸಾಕ್ಷಾತ್ ದೇವಿ ನೀನಿರುವುದ ಬಲ್ಲೆ.
ನದಿಯ ದಾಟಿ, ದಡವನು ಸೇರಿ,
ತೋಳಿನ ತುಂಬ ನಿನ್ನನು ಹಿಡಿದು,
ತುಟಿತುಟಿ ಚುಂಬನ ಮೆತ್ತನೆ ನೀಡಿ,
ಕಳೆದ ದಿನಗಳ ಸ್ಮರಿಸುವ ಆಶೆ.
ಕಾಲದ ಪರೆಗಳ ಆಳದ ಕೆಳಗೆ,
ಕಾಲಗರ್ಭದ ಕತ್ತಲ ತಳದಲಿ
ನಿನ್ನದೆ ಬೆಳಕಿನ ಲೋಕದ ಮಧ್ಯೆ
ಕಂಗೊಳಿಸುವ ಸುಂದರ ದೇವಿ ನೀನು.
ಕಳೆದ ದಿನಗಳ ಜೀವಂತಿಕೆ ನೀನು,
ಗತಕಾಲಕೆ ಸಾಂಪ್ರತ ಶ್ವಾಸ ಕೊಟ್ಟು,
ನಿನ್ನಾಸ್ವಾದನೆಗೆ ಬಂದಿರುವ ನನಗೆ
ಹೊಸತನ ಹುರುಪು ಕೊಟ್ಟು ನೋಡು.
ನಿನ್ನೆ ನಾಳೆಯ ಬೇಧವ ಮರೆತು,
ಗತಕಾಲವ ಸಾಂಪ್ರತಕೆ ಎಳೆದು ಬಿಟ್ಟು,
ಕಾಲನಿಯಮವ ಮರೆತು ನಾವು
ಮತ್ತೆ ಜೊತೆ ಸೇರುವೆವು ನೋಡು.
ನಿನ್ನ ನನ್ನ ಪ್ರೀತಿಯ ಹೊಂಬೆಳಕು
ಕಾಲನಿಷ್ಠ ಕಟ್ಟುಪಾಡಿಗೆ ಹೊರಗು;
ನಾ ನಿನ್ನ ಚೈತನ್ಯ, ನೀನೆನ್ನ ಚೈತನ್ಯ,
ನಮ್ಮ ಸಂಸರ್ಗ ಆನಂದದ ನಾಂದಿ.
ನೀನಲ್ಲಿ, ನಾನಿಲ್ಲಿ, ಕಾಲಕಂದರ ಮಧ್ಯೆ,
ಕಾಲಕಂದರ ದಾಟಿದೆ ನಮ್ಮ ಪ್ರೀತಿ;
ನನ್ನುಸಿರು ನಿನ್ನಲ್ಲಿ, ನಿನ್ನುಸಿರು ನನ್ನಲ್ಲಿ,
ಬರೆ ದೇಹಗಳುಳಿದಿವೆ ಈಗ ಇಲ್ಲಿ, ಅಲ್ಲಿ.
ಸಾಂಪ್ರತ ಮರೆತು ಬರುವಾಸೆ ನನಗೆ,
ಗತಕಾಲ ಬಗೆದು ಸೇರುವಾಸೆ ನಿನಗೆ;
ಈಯಾಸೆಗಳ ಮಧ್ಯೆ ಹರಿಯುವ ಹಳ್ಳ
ದಾಟಲು ಉಳಿದಿದೆ ನೆನಪು ಮಾತ್ರ.
This poem has not been translated into any other language yet.
I would like to translate this poem