ಹೊಸ ದಿಗಂತ Poem by PRAVEEN KUMAR Kannada Poems

ಹೊಸ ದಿಗಂತ

ನೀನು ಆವಿ ಮೋಡವಾಗಿ ದೂರ ಗಗನವೇರುತಿರಲು
ಯಾರಿಗಾಗಿ ಬರೆದು ನಾನು ಹಾಡಬೇಕು ಹೇಳು ನೀನು,
ಕಾಲ ಕುದುರೆಯೇರಿ ನೀನು ದೂರ ದೂರ ಓಡುತಿರಲು
ಹೇಗೆ ನಿನ್ನ ಬೆನ್ನು ಹಿಡಿದು ಹೆಜ್ಜೆ ಮುಂದೆ ಇಡಲಿ ನಾನು?

ಇಲ್ಲಿ ನೋಡು ಹಸಿರು ಹಾಸು, ಹಿಡವ ಕೊಡುವ ತಂಪು ಬೆಳಕು,
ಸ್ವಲ್ಪ ನಿಂತು ದಣಿವು ಮರೆತು, ಸುತ್ತಲಲ್ಲಿ ಸ್ವಲ್ಪ ಬೆರೆತು,
ಕೊಟ್ಟು ಪಡೆದು, ಇಟ್ಟು ತೆಗೆದು, ಹೊಸತು ಶಕ್ತಿ ಹೀರಿ ಬಳಕು,
ಮತ್ತೆ ನೀನು ತಿಳಿಯದೆಡೆಗೆ ನಿನ್ನ ಪಯಣ ಮುಂದುವರೆಸು.

ಹೀಗೆ ಮುಂದೆ ಹಬ್ಬಿ ಹರಿದು ಎಲ್ಲಿ ನೀನು ಸೇರಬೇಕು?
ನನ್ನ ಬಿಟ್ಟು ದೂರ ನಿಂತು ಯಾಕೆ ಹೃದಯ ಚುಚ್ಚಬೇಕು?
ಒಂಟಿಯಾಗಿ ಕತ್ತಲಲ್ಲಿ ಕಣ್ಣುಕಟ್ಟಿ ನಿನ್ನ ಕರೆವ
ನನ್ನ ಮರೆತು ಬೆಳಕಿನೆಡೆಗೆ ನೀನು ಯಾಕೆ ಏರಬೇಕು?

ಬಾರೆ ಚೆಲುವೆ, ನಿಮಿಷ ನಿಂತು ಬೆನ್ನು ತಿರುಗಿ ಹಿಂದೆ ನೋಡು,
ಹೃದಯ ಬಿಚ್ಚಿ, ಕಣ್ಣು ತುಂಬಿ, ಕಳೆದ ಯುಗದ ಚೆಲವು ನೋಡು,
ಏರು ಪೇರು ಮರೆತು ನಾವು ಒಬ್ಬರೊಳಗೆ ಒಬ್ಬರಾಗಿ
ಎಲ್ಲ ಮರೆತು ಮನಸು ತುಂಬಿ ಹಾಡಿ ನಲಿದ ಸ್ವರ್ಗ ನೋಡು.

ಭೂತ ವರ್ತಮಾನ ನಡುವೆ ಸೇತು ಒಂದು ಎದ್ದು ಬರಲಿ,
ವರ್ತಮಾನ ಭವಿಷ್ಯತ್ತು ಕೂಡಿ ನಮ್ಮ ಬಂಧ ಬೆಸೆದು
ನಮ್ಮ ಪಯಣ ಸುಗಮವಾಗಿ ಕಾಲದುದ್ದ ಬೆಳೆಯುವಂತೆ
ಸ್ವಲ್ಪ ನಿಂತು, ಕೈಯ ಹಿಡಿದು ನನ್ನ ಮುಂದೆ ನಡೆಸು ಬಾರೆ.

ಎಲ್ಲಿ ನೀನು ಹೋಗು ನಾನು ಅಲ್ಲಿ ನಿನ್ನ ಬಿಡದೆ ಬರುವೆ,
ಮೋಡವಾಗು, ಗಾಳಿಯಾಗು, ಹಾಡು ಹೂವು ಗಂಧ ಚೆಲುವು,
ಯಾವುದಾದರೇನು ನೀನು, ನಿನ್ನ ಬೆನ್ನು ಬಿಡದೆ ಬರುವೆ,
ಹೃದಯಜೀನು ಮೇಲೆ ಕೂತು, ಮನಸು ಕುದುರೆ ಏರಿ ಬರುವೆ.

ನಿನ್ನ ಸೀರೆ ಸೆರಗು ದೂರ ದಿಕ್ಕಿನಿಂದ ದಿಕ್ಕುತನಕ
ಹಮ್ಮಿ ರಮ್ಯ ಸೊಬಗಿನಿಂದ ನೀನು ನಡೆವ ದಾರಿ ತಿಳಿಸಿ
ಮುಂದೆ ಮುಂದೆ ನಿನ್ನ ಹಿಂದೆ ಕಾಲಗುಂಟ ಕರೆಯುತಿಹುದು,
ನಿನ್ನ ನನ್ನ ಬಂಧ ಹೊಸತು ಹೊಸ ದಿಗಂತ ತೆರೆಯುತಿಹುದು.

ಮನಸು ಮನಸು ಕೂಡಿದಾಗ ಕಾಲತಾಣ ಗೋಡೆ ಕುಸಿದು,
ಹರ್ಷ ಹರಿದು ವರ್ಷವಾಗಿ ಮಹಾಪೂರ ರೂಪವಾಗಿ,
ದಿಕ್ಕು ದಿಕ್ಕಿನಲ್ಲಿ ಹರಡಿ, ದಿವ್ಯ ಬೆಳಕು ಪುಂಜವಾಗಿ
ಲೋಕ ಲೋಕವೆಲ್ಲ ಸುತ್ತಿ, ನಮ್ಮ ಕಡೆಗೆ ಚೆಲ್ಲುತಿಹುದು.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success