ಭಾವಗಳ ಪದರುಗಳನೊಂದೆಂದೆ ಕವಚಿ,
ಏಕಾಂತದೊಳಿರುವಾಗ, ನೀ ಬರುವ ಚಂದ,
ಮರುಭೂಮಿಯಲ್ಲೊಂದು, ಸಿಹಿ ನೀರಿನ ಬುಗ್ಗೆ,
ಜಿಗಿದು ಮೇಲಕ್ಕೆ, ನೆಲವನಾರ್ದೃಗೊಳಿಸಿದ ರೀತಿ,
ಒಣಗಿದ ಬೇರುಗಳ ಮೊಳೆಸಿ, ಜೀವಹಸನುಗೊಳಿಸಿದ ರೀತಿ.
ಅದಾವುದೋ ಕಾಣದ, ತಿಳಿಯದ ಲೋಕದಿಂದ,
ಭಾವ, ಬಣ್ಣಗಳ ದೊಡ್ಡ ಹೊರೆಯನ್ನು ಹೊತ್ತು,
ಹೃದಯದಾಳದಿಂದ, ನೀನು, ಮೇಲುದಿಸಿ ಬರುವಾಗ,
ಕವಿದ ಕತ್ತಲೆ ಕರಗಿ, ಅರುಣೋದಯವಾಗುವುದು, ಚಿನ್ನ;
ಅದೇ ಚೆಲುವು, ಚೈತನ್ನ, ಅದೇ ಹರ್ಷ, ಬಣ್ಣ.
ಬರುವಾಗ ನೀನು ಒಬ್ಬಳೇ ಬರುವವಳಲ್ಲ,
ರಂಗುರಂಗಿನ, ನೆನಪಿನಲೆಗಳ ಮಾಲೆ ತರುವೆ;
ಒಂದೊಂದು ನೆನಪು, ಒಂದೊಂದು ರಮ್ಯ ಲೋಕ,
ಒಂದೊಂದು ರಂಗು, ಒಂದೊಂದು ಭಾವ ಲೋಕ;
ಒಂದೊಂದು, ಅಂತರ್ಯ ಶುಭ್ರಗೊಳಿಸುವ ಪುಣ್ಯಗಂಗೆ.
ಹನಿ ಹನಿ, ಹೊಳೆಯಾಗಿ, ನದಿ, ಕಡಲು ಸಾಗರವಾಗಿ,
ಹಬ್ಬಿ ಹರಿದು, ಕೊಬ್ಬಿ, ನನ್ನನ್ನು ತುಂಬಿ ಬಿಡುವೆ;
ದಟ್ಟ ಮೋಡಗಳು, ಕೂಡಿ ಬಡಿದು, ಗುಡುಗಿ,
ಮಿಂಚು ಬೆಳಕಾಗಿ, ಮಿಂಚಿ, ಲೋಕಬೆಳಗುವಂತೆ,
ಮನಸಿನಾಕುಲ, ವ್ಯಥೆಯನ್ನು ಹರಿಸಿ, ಬೆಳಕು ತರುವೆ.
ನೀನೆದುರು ನಿಂತಾಗ, ನಾನು ನಾನಾಗುವುದಿಲ್ಲ,
ರೆಕ್ಕೆ ಕವಲೊಡೆದು, ಮೇಲೇರಿ, ಆಕಾಶಕ್ಕೇರಿ ಬಿಡುವೆ;
ನೀನು ಮನ ತುಂಬಿರಲು, ಬೆಳಕೆ ನಾನಾಗಿ,
ಇಂದ್ರಧನಸ್ಸುಗಳನೇರಿ, ಆಶೆಹೂವುಗಳ ಹಿತಶಯ್ಯೆಯಲ್ಲಿ,
ತಿಳಿಯದಾನಂದ, ಸಾರ್ಥಕತೆುಂದ, ಮೈಮರೆತು ಬಿಡುವೆ.
This poem has not been translated into any other language yet.
I would like to translate this poem