ಸಂಗಾತ Poem by PRAVEEN KUMAR Kannada Poems

ಸಂಗಾತ

ಈ ಅನಂತ ಅಲ್ಲೋಲ ಕಲ್ಲೋಲದ ಮಧ್ಯೆ,
ಈ ಕಾಲ ಕಾರ್ಯಕಾರಣ ರಾಶಿ ಮೂಲದ ಕೆಳಗೆ,
ದಟ್ಟ ಕತ್ತಲೆಯ ಸ್ತಬ್ಧ ಮುಗ್ಧತೆಯ ಒಳಗೆ
ಕೈಲಾಗದೆ ಸಿಲುಕಿ ಚಡಪಡಿಸುವ ನೀನು
ಮೇಲೆದ್ದು ಗೂಡು ಸೇರುವುದು ಎಂದು?

ಗಾಳಿಪಥದಲ್ಲಿ ಹೋದ ದಾರಿ ಗುರುತಾಗಿಲ್ಲ,
ಕಗ್ಗತ್ತಲಲಿ ಕಳೆದ ದೂರ ಕಾಣಿಸಲಿಲ್ಲ,
ಎಲ್ಲೋ ಅಜ್ಞಾತ ರಾಗವರ್ಣದ ನಡುವೆ
ಹೊಸಗರಿಗಳ ತೊಟ್ಟು, ಹೊಸ ಪುಚ್ಚ ಹರಡಿಟ್ಟು,
ಗೂಡು ಸೇರಲು ಹವಣಿಸುವೆ ನೀನು.

ಕಾಲಪದರನು ದಾಟಿ, ಭೌತದೂರವನಳಿಸೆ,
ಅಂತರ್ದ್ಠೃಯ ತೆರೆದು ಹಾರಾಡಿ ಬಡ ಹಕ್ಕಿ
ಕಾಲಾಂತರದಲ್ಲಿ ಗೂಡು ಸೇರುವುದುಂಟು;
ಜೀವನದ ಪರಮೊದ್ದೇಶ ಕೈಗೂಡುವುದೆಂದು
ನಿರಾಶೆ ನಿರೀಕ್ಷೆಯಲಿ ನುಲಿಯುತ್ತಿರುವೆ ನೀನು.

ತನ್ನಮನೆ ಸೇರುವ ಅದಮ್ಯ ಬಯಕೆ.
ತನ್ನತನದೊತ್ತಾಸೆಯ ಅನನ್ಯಧಾರೆ,
ಬಾಯೆನುವ ಕರೆಯ ಅಗೋಚರ ಸೆಳೆತ,
ಪರಿಪಕ್ವಕಾಲಗಳು ಹೆಣೆದು ಹರಡಿದೆ ಜಾಲ,
ನಿನಗಿನ್ನೂ ದಿಕ್ಕನ್ನು ತೋರುವವರಿಲ್ಲ.

ಬಯಕೆ ಬಳ್ಳಿಯ ಹಿಡಿದು ಬೆನ್ನಾರೆ ಹಾರಿ,
ಧ್ರುವಗಳೊಂದು ದಿನ ಮನಸಾರೆ ಸೇರಿ
ಕಾಲತಲ ಮೀರಿದ ಮೇಲಮೇಳೈಸುವುದು,
ಯುಗಯುಗಾಂತರದ ಶ್ರುತಿರತಗೊಳ್ಳುವುದು,
ಪುರುಷ-ಪ್ರಕೃತಿ ಲೀಲೆ ಪ್ರವರ್ತಗೊಳ್ಳುವುದು.

ಕಾಲತಲ ಗುಣದಲ್ಲಿ ಪ್ರಕೃತಿಯು ಮೂಡಿರಲು
ಕಾಲತಲ ಮೀರಿ ನಿಜಮೇಲ ಶ್ರುತಿಯಾಗುವುದೆ?
ಹೊಸ ಪುಚ್ಚವ ಹರಡಿ, ಬೆಡಗಿ ಹಾರುವ ಹಕ್ಕಿ
ಆತುರದ ಕಣ್ಣಲ್ಲಿ ಹೊಳಪಾಗಿ ನಿಲ್ಲುವುದೆ?
ಹಕ್ಕಿ, ನೀನಾಗಿ ನೀನು ಹಾರಾಡಿ ಬಾ.

ನಿನ್ನ ನಿಜ ನಡೆಯಲ್ಲಿ, ನೀನಿಡುವ ಶ್ರುತಿಯಲ್ಲೆ
ನೀನು ನೀನಾಗಿ ಬಂದರೆನೆ ಚೆನ್ನ,
ನಿನ್ನಾ ನಿಜ ರೂಪ, ಆ ರಾಗ, ಅವೇಗ
ಕೂಡಿದರೆ ಪರಿಪೂರ್ಣ ಅಭಾಗ್ಯತೆ ನೀನಾಗಿ
ಶ್ರುತಿಗೊಂಡ ಈ ಮೇಲ ಸಂಗಾತವಾಗುವುದು.

Tuesday, July 11, 2017
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success