ಹಾರಿ ಬಾ Poem by Praveen Kumar in Bhavana

ಹಾರಿ ಬಾ

ರೆಕ್ಕೆ ಕೊಡುವೆ, ಹಕ್ಕಿಯಾಗಿ ಹಾರಿ ನೀನು ಬಳಿಗೆ ಬಾ,
ವೇಗ ಕೊಡುವೆ, ಜಿಂಕೆಯಾಗಿ ಓಡಿ ನೀನು ಇಲ್ಲಿ ಬಾ,
ತಾಳವಿಡುವೆ, ನವಿಲಿನಂತೆ ಕುಣಿದು ಕುಣಿದು ಬಳಿಗೆ ಬಾ,
ಸಂಗೀತ ಕೊಡುವೆ, ಶ್ರುತಿಯನಿಟ್ಟು ಹಾಡಿ ಹಾಡಿ ಇಲ್ಲಿ ಬಾ;
ಆಕಾಶವೇರಿ, ಗಾಳಿ ತೂರಿ,
ಆತ್ಮ ಕರೆಯ ಸಂಜ್ಞೆ ಹಿಡಿದು
ಪ್ರೀತಿ ಪಥದ ಬೆಳಕಿನಲ್ಲಿ
ಒಂದೇ ವೇಗದಲ್ಲಿ ಬಾ;
ನೋಡು ಇಲ್ಲಿ, ಕಪ್ಪು ಹರಿದು ಬೆಳಕು ಪುನಹ ಹಬ್ಬಿದೆ,
ಹಿಂದೆ ಇದ್ದ ಚೆಲುವು ಗೆಲುವು ಒಲವು ಪುನಹ ಬಂದಿದೆ,
ನೀನೊಬ್ಬಳಿಲ್ಲ, ಉಳಿದುದೆಲ್ಲ ತನ್ನಿಂದ ತಾನೆ ಇಲ್ಲಿದೆ,
ನೀನೊಬ್ಬಳಿಲ್ಲ, ಬಂದು ಬೇಗ ಕಳೆದುದನ್ನು ತಂದಿಡು.

ಹಾರಿ ಬಂದು, ಓಡಿ ಬಂದು, ಕುಣಿದು ಬಂದು, ಹಾಡಿ ಬಂದು
ದಣಿದು ನೀನು, ಮೇಲುಸಿರು ಬಿಟ್ಟು, ಕೆಂಪು ಏರಿ ನಿಂತರೆ,
ವೈಶಾಖವಿರಲಿ, ಶಿಶಿರವಿರಲಿ, ವಸಂತ ಹಬ್ಬಿ ಬರುವನಿಲ್ಲಿ,
ಸಂಗೀತ ನೃತ್ಯ ಕೇಳಿ ತುಂಬಿ, ನಿಸರ್ಗ ಸ್ವರ್ಗವಾಗಲುಂಟು;
ಹೃದಯ ಹೃದಯ ಬಡಿತದಿಂದ,
ಜೀವ ಜೀವ ಬೆಸುಗೆಯಿಂದ,
ಆತ್ಮ ಆತ್ಮ ಚೆಲುವು ಕೂಡಿ
ಭಾವ ಚೆಲುವು ಬಸಿವುದು;
ಒಣಗಿನಿಂತ ಕೊಂಬೆಯಲ್ಲು ಹೊಸತು ಜೀವ ಚಿಗುರಿ ಬಂದು,
ಬತ್ತಿದಂತ ಒರತೆಗಳು ಮತ್ತೆ ಒಸರಿ ಹರಿದು ಬಂದು,
ಹಸುರು ಹಬ್ಬಿ, ರಂಗು ಚೆಲ್ಲಿ, ಗಾಳಿಯಲ್ಲಿ ಸೌಗಂಧ ತುಂಬಿ
ಮರೆತಿದ್ದ ಆಶೆ ಬಯಕೆ ತುಂಬಿ ಮೈಯಲ್ಲಿ ಜೀವ ಚಿಗುರುವುವು.

ದೂರದಲ್ಲಿ ನಿಂತ ನೀನು ಮತ್ತೆ ಬಳಿಗೆ ಬರಬೇಕೆಂದು
ದಿಕ್ಕು ದಿಕ್ಕಿನಲ್ಲಿ ಅಂತ: ಕರಣ ಸಂಕ ಕಟ್ಟುತ್ತಿರುವೆ,
ಭಾವಹಕ್ಕಿ ಕೊರಳಿನಲ್ಲಿ ಪ್ರೀತಿ ಸಂದೇಶ ನಿನಗ ಕಟ್ಟಿ
ಹೃದಯ ಪ್ರೇಕ್ಷಕ ತೆರೆದು ಇಟ್ಟು ಮರು ಸಂದೇಶಕೆ ಕಾಯುವೆ;
ಗುರುತ್ವ ಗದ್ದಲಕ್ಕಿಂತ ಬೇರೆ
ಸಂದೇಶ ನನಗೆ ಬರುವುದಿಲ್ಲ,
ಕಾದು, ಕಾದು ಕಿವಿಗಳೊಡೆದು
ಪ್ರೇಕ್ಷಕವ ಕಿತ್ತಿಡುವ ಸಿಟ್ಟು;
ನನ್ನಂತೆ ನೀನು ಗುರಿಯ ಮರೆತು, ಗುರುತು ಮರೆತು, ದಾರಿ ಮರೆತು,
ಕಾಲಗರ್ಭದೊಳಗೆ ಇಳಿದು, ಅಜ್ಞಾತ ನೆಲದ ಮೇಲೆ ಹೂತು,
ಹೇಗೆ ಎಲ್ಲಿ ಭೇಂಟವೆಂದು, ಹೆಜ್ಜೆ ಹೀಗೆ ಇಡುವುದೆಂದು
ಚಡಪಡಿಕೆಯಲ್ಲೆ ಇದ್ದು ವರ್ಷ ಯುಗಗಳು ಉರುಳಿತೊ?

ನಾನು ಇಲ್ಲಿ ನೀನು ಅಲ್ಲಿ, ಮಧ್ಯೆ ಅಜ್ಞಾತ ಪ್ರಪಂಚವು,
ಮುಂದೆ ನಡೆಸುವವರು ಇಲ್ಲ, ಬೆಳಕು ತೋರುವವರು ಇಲ್ಲ,
ಕೈಯ ಹಿಡಿದು ಮುನ್ನಡೆಸಿ, ನಮ್ಮ ಜೊತೆಜೊತೆಗೆ ತರುವ ಶಕ್ತಿ
ಯಾಕೆ ಇನ್ನೂ ತಲೆಯ ಮರೆಸಿ ನಮ್ಮ ಹೀಗೆ ಕಾಡುತಿಹುದೊ?
ಅವರ ಇವರ ಗೋಜು ಬೇಡ,
ಕಾಲ ವಿಧಿಯ ಹಂಗು ಬೇಡ,
ನಾನು ನೀನು ದಾರಿ ಹುಡುಕಿ
ಕೂಡಿ ನಿಲ್ಲಬಾರದೇಕೆ?
ರೆಕ್ಕೆ ಕೊಡುವೆ, ಹಕ್ಕಿಯಾಗಿ ಹಾರಿ ನೀನು ಬಳಿಗೆ ಬಾ,
ವೇಗ ಕೊಡುವೆ, ಜಿಂಕೆಯಾಗಿ ಓಡಿ ನೀನು ಇಲ್ಲಿ ಬಾ,
ತಾಳವಿಡುವೆ, ನವಿಲಿನಂತೆ ಕುಣಿದು ಕುಣಿದು ಬಳಿಗೆ ಬಾ,
ಸಂಗೀತ ಕೊಡುವೆ, ಶ್ರುತಿಯನಿಟ್ಟು ಹಾಡಿ ಹಾಡಿ ಇಲ್ಲಿ ಬಾ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success