ಹಾಡುಹಕ್ಕಿಯ ಕೊರಳಿನಿಂದ Poem by PRAVEEN KUMAR Kannada Poems

ಹಾಡುಹಕ್ಕಿಯ ಕೊರಳಿನಿಂದ

ಯಾವ ತಾರಾ ಲೋಕದಿಂದ,
ಯಾವ ಬೆಳಕಿನೇಣಿುಳಿದು,
ಯಾವ ಕಲ್ಪನೆ ಕುದುರೆಯಲ್ಲಿ,
ಬಣ್ಣ ಬಣ್ಣದ ಪ್ರಭಾವಳಿಯ ಮಧ್ಯೆ,
ಧವಳ ತೇಜೋ ಪುಂಜವಾಗಿ,
ನನ್ನ ಹೃದಯ ಚೈತನ್ಯವಾಗಿ,
ಅವತರಿಸಿ ನಿಂತೆ ನನ್ನಲಿ?

ಸೌಂದರ್ಯ ಸಾರ ಗುಡಾಣವಾಗಿ,
ಸಹಸ್ತ್ರ ತೀರ್ಥ ಸಂಗಮವೆ ಆಗಿ,
ಸತ್ಯಲೋಕದ, ಮಹಾ ಶಕ್ತಿಯಾಗಿ,
ನನ್ನೊಳಗೆ ತಂದೆ ಈ ಅರುಣೋದಯ;
ಕತ್ತಲುದುರಿ ಬೆಳಕು ಬಂತು,
ಜೀವದಲ್ಲುದುಗಿದ ಥಂಡಿ ಸರಿದು,
ಏನೋ ಭರವಸೆ, ಹೊಂಗಿರಣ ಪುಂಜ,
ಏನೋ ಆಶೆ, ಪ್ರಿಯ ಪ್ರತೀಕ್ಷ ಕುಂಜ,
ಹರಿಸಿತೆಲ್ಲೆಡೆ ನವನವೀನತೆ.

ಹಾಡುಹಕ್ಕಿಯ ಕೊರಳಿನಿಂದ,
ಗಿಡ ಪೊದೆಗಳ ಹಸಿರಿನಿಂದ,
ಎಳೆ ಬಿಸಿಲಿನ ಕಾವಿನಿಂದ,
ನವತಾರುಣ್ಯದ ಕನಸಿನಿಂದ,
ಮೂಡಿ ನನ್ನೆಡೆ ಹಬ್ಬಿದೆ;
ಒಳಗೆ ಹೊಕ್ಕು, ತುಂಬಿ ನಿಂತು,
ಪವಿತ್ರ ತೀರ್ಥಗಳೊರತೆಯಾಗಿ,
ದಿವ್ಯ ನಂದಾದೀಪವಾಗಿ,
ವಿಶ್ವದರ್ಶನ ಭವ್ಯತೆಯ ತಂದು,
ಬೆಳಕಿನೋಕುಳಿ ಚೆಲ್ಲಿದೆ.

ಮಾಘ ಕಳೆದು, ವಸಂತ ಬಂತು,
ಕಂಡಲೆಲ್ಲ ಹುಮ್ಮಸ್ಸು ನಿಂತು,
ಈ ವಿಶ್ವ ತುಂಬ ನಾನಾದ ಭಾವ,
ಆನಂದ ತುಂದಿಲ ನಿನಾದ, ಜೀವ;
ನಿನ್ನ ದರ್ಶನ, ಪ್ರಿಯಾನಂದ ಸೇಂಚನ,
ನಿನ್ನ ಸ್ಪರ್ಶ, ಮಹಾಸುಖದ ವರ್ಷ,
ನಿನ್ನ ಸಾನ್ನಿಧ್ಯ ಸಾಗರದ ತುಂಬ,
ಹರಿದು ತೇಲಾಡುವ ಮೀನು ನಾನು;
ನಿನ್ನಲ್ಲೆ ನನ್ನ ಜೀವ, ಭಾವ,
ನಿನ್ನಲ್ಲೆ ನನ್ನ ಜೀವನದ ಮಾರ್ಗ,
ಬಾರೆ, ನನ್ನ ತಬ್ಬಿ ಹಿಡಿದು,
ನಿನ್ನೊಳಗೆ ನನ್ನ ಸದಾ ಇರಿಸು.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success