ನೀನು ನಾನು Poem by Praveen Kumar in Bhavana

ನೀನು ನಾನು

ನಿನಗೆ ನಾನು, ನನಗೆ ನೀನು,
ಎಂದು ನೀನು, ತಿಳಿಯೆ ಏನು?
ಹಾಲು ಜೇನು, ನಾನು ನೀನು,
ಇದಕ್ಕೆ ಸಾಕ್ಷ್ಯಿ, ಭೂಮಿ ಬಾನು.

ಸಾಮರಸ್ಯ, ನಮ್ಮ ಉಸಿರು,
ನಮ್ಮ ಹೊಸೆದ, ಬಳ್ಳಿ, ಬಸಿರು;
ಪ್ರೀತಿ ಭಾಷೆ ತರುವ ಹಸುರು,
ನಮ್ಮೆದೆಗಮೃತದ, ಧಾರೆ, ಪಸರು.

ನೀನು ತಾಳ, ನಾ ಸಂಗೀತ,
ನಾನು ರಾಗ, ನೀನದರಾವೇಗ;
ನಾನು ನೀನು, ನೀನು ನಾನು,
ಒಂದೆ ಜೀವ, ಜೀವ ಭಾವ.

ನನ್ನ ಆತ್ಮದೊಳಗೆ ನಗುವ,
ಆತ್ಮದೊಳಗಿನ ಆತ್ಮ, ನೀನು;
ನಿನ್ನ ಜೀವದೊಳಗೆ ಮಿಡಿವ,
ಜೀವದಾಳದ ಜೀವ, ನಾನು.

ನಿನ್ನ, ನನ್ನ, ಮಧ್ಯೆ ಹೊಸೆದ,
ಜೀವ ಬಂಧ, ಹೂವು ಹಗುರ;
ಚಿನ್ನದಂತೆ, ಸ್ವಚ್ಚ, ಮೃಧುರ,
ವಜ್ರದಂತೆ, ಮಿಂಚು ಮಾಲೆ.

ನಿನ್ನ ಹೊರತು, ನಾನಪೂರ್ಣ,
ನನ್ನ ಹೊರತು, ನೀನಪೂರ್ಣ;
ನಾನು, ನೀನು, ಸೇರಿದಾಗ,
ವಿಶ್ವದಲ್ಲಿ, ಚೈತನ್ಯದುಗುಮ.

ನೀನು ಪೂರ್ವ, ಪಶ್ಚಿಮ ನಾನು
ಒಂದನ್ನೊಂದು ಬಿಟ್ಟಿರುವುದೆ?
ನೀನು ನಾನು ಭಾವ ನಮಗೆ
ಒಂದೆ ತನದ ಇಬ್ಬದಿಯ ರೂಪ.

ನಾನು ಕಿರಣ, ನೀನು ಬೆಳಕು,
ಬೆಳಕು ಬಿಟ್ಟು, ಕಿರಣವುಂಟೆ?
ಕಿರಣ ಬಿಟ್ಟು, ಬೆಳಕುವುಂಟೆ?
ಜೀವದಾಹ, ನೆರಳಲ್ಲುಂಟೆ?

ನಾ ವೈಶಾಲ್ಯ, ನೀನು ಆಳ,
ಆಳ ವೈಶಾಲ್ಯದಿಂದ ಲೋಕ,
ನನ್ನ ಹೊರತು ನೀನು ನಿಬದ್ಧ,
ನಿನ್ನ ಹೊರತು ನಾನು ಮೌಢ್ಯ.

ನೀನೆಲ್ಲೆ ಇರಲಿ, ನಾನು ಅಲ್ಲಿ,
ನಾನೆಲ್ಲೆ ಇರಲಿ, ನೀನು ಅಲ್ಲಿ;
ಕಾಲ ಸ್ಥಳದ ಗೋಡೆ, ಬೇಲಿ,
ನಿಲ್ಲದಂತಹ ಬಂಧ, ನಮ್ಮದು.

ನೀನೆನ್ನ ಒಳಗೆ, ನಾ ನಿನ್ನ ಒಳಗೆ,
ಒಳಗೆ, ಹೊರಗೆ, ಒಂದೆ ಇಲ್ಲಿ;
ಲವಣದಂತೆ ಬೆರೆತ ನಮಗೆ,
ಒಬ್ಬರೊಬ್ಬರೊಳಗೆ ತೃಪ್ತಿ.

ನಿನ್ನ ನನ್ನ ಸಂಯೋಗದಿಂದ
ಸುಖ ಸೌಂಧರ್ಯ ಮೂಡಿದೆ.
ನಿನ್ನ ನನ್ನಗಲಿಕೆಯಿಂದ
ದು: ಖ ಹತಾಶೆ ತುಂಬಿದೆ.

Tuesday, July 11, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success