ತಪಸ್ವಿನಿ Poem by PRAVEEN KUMAR Kannada Poems

ತಪಸ್ವಿನಿ

ತನ್ನನ್ನೆ ಮರೆತು, ದೀರ್ಘ ದ್ಯಾನದಲಿ ಬೆರೆತು,
ಮೈಮನ ಹೃದಯಾತ್ಮಗಳನೊಂದಾಗಿ ಬೆಸೆದು
ಹಿಡಿದ ಲಕ್ಷ್ಯದಕಡೆಗೆ ನಡೆವ ನಿನ್ನಚಲ ಛಲಕಂಡು
ಶಿವನನ್ನು ಮೆಚ್ಚಿಸಿದ ಗಿರಿಜೆ ಕಡು ನಾಚಬೇಕು,
ಶ್ರೀಕೃಷ್ಣನನೋಲುಸುವ ರಾಧೆ ಕರುಬಬೇಕು.

ನೀ ಹಿಡಿದ ತಪಸ್ಸು ಬರೆ ಬೆಂಕಿ, ಕಠೋರತೆಯಲ್ಲ,
ವಿಶ್ವಾಂತರ ವಿಶ್ವಗಳ ದಾಟಿ ದಹಿಸುವ ಅಗ್ನಿರಾಶಿ;
ನಿಹಾರಿಕೆಗಳ ಮೂಲೆಮೂಲೆ ಹುಡುಕಾಡಿ ಹರಿವ,
ಗುರಿಮುಟ್ಟುವ ತನಕ ಕಾಲತಲಗಳ ಮೀರಿ ಮುನ್ನುಗ್ಗಿ,
ಗುರಿಮುಟ್ಟಿದಾಗ ಬೇರ್ಪಡದಂತೆ ಬೆಸೆವ ಪರಿಕಾರ.

ನಿನ್ನದೋ ಆತ್ಮಾತ್ಮ ಸಂಗಮದ ಹಂಬಲದ ರಮ್ಯ ತಪಸ್ಸಲ್ಲ,
ನಿನ್ನಾತ್ಮ ಬಲದಿಂದ ನನ್ನಾತ್ಮಕ್ಕೊರೆಕೊಡುವ ದಿವ್ಯ ತಪಸ್ಸು;
ನಿನ್ನ ಮೈಮನ ಹೃದಯಾತ್ಮಗಳನೊಂದೊಂದೆ ಬಲಿಕೊಟ್ಟು
ನನ್ನ ಬಲಿಸುವ ನಿನ್ನ ಪರಿ ಸ್ವಾರ್ಥ ನಿಯಮಕೆ ಹೊರಗು;
ನಮ್ಮ ಬೆಸುಗೆಯ ಬಗೆದೂ ನನ್ನ ಹಿತಕೆ ನಿನ್ನ ಮುಡಿಪಿಡುವೆ.

ನಿನ್ನನ್ನೆ ಸುಟ್ಟು ನೀ ನನಗೆ ಬೆಳಕು ಕೊಡುವ ನಂದಾದೀಪ,
ನನ್ನ ಪಾಪಗಳ ತೊಳೆದು ಮ್ಲಾನಿಸುವ ಗಂಗಾ ಪ್ರವಾಹ;
ಕೊಟ್ಟಷ್ಟು ಸಾಕೆನಿಸದೆ, ನಡೆದುದರಲ್ಲಿ ತೃಪ್ತಿಗೊಳದೆ
ತ್ಯಾಗಗಳ ಮಹಾಪೂರದಲೆ ನೀನು ತೇಲಿಸುವೆ ನನ್ನ,
ಸಾಕೆಂದರೆ ಸಿಟ್ಟು ನಟಿಸಿ ನನ್ನ ಬಾು ಮುಚ್ಚಿಸುವೆಯಲ್ಲ.

ನಿನ್ನ ತಪಸಿನ ಬಗೆಯಲಿ ಮಿಂದು ನಾ ಪರಿಶುಧ್ಧನಾದೆ,
ನಿನ್ನ ತಪಸಿನ ತಾಪದಲಿ ಪುಟವಿಟ್ಟು ಶುಭ್ರ ಬೆಳಕಾದೆ;
ಇಹಪರ ಬಿಟ್ಟು, ಕಾಲತಲ ಮೀರಿ ನಡೆವ ನಿನ್ನೀ ತಪಸ್ಸು
ನಿನ್ನನನ್ನಭೇದ್ಯ ಬಂಧದಲೌಕಿಕಭಿವ್ಯಕ್ತಿ, ಅನುರಕ್ತಿ ಶಕ್ತಿ,
ಸಿಟಿಲೊಡೆದಾತ್ಮಗಳು ಮತ್ತೆ ಸಮ್ಮಿಳಿಸುವ ದಿವ್ಯ ಪ್ರಕ್ರಿಯೆ.

Wednesday, July 12, 2017
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success