ನೀನೆಲ್ಲೇ ಇರು, ನೀನು ಹೇಗೇ ಇರು,
ಇಲ್ಲಿ ಅಥವ ಬೇರಾವುದೋ ಲೋಕದಲಿ
ನಿನ್ನ ಶೋಕಕ್ಕೆ ನಾನು ಜೊತೆಕೊಡುವೆ,
ಕಣ್ಣೀರಿನ ಪ್ರತಿಬಿಂದು ಹಂಚಿಕೊಂಡು
ನಿನ್ನ ಜೊತೆ ನಿತ್ಯ ನಾನಿರುವೆನು ಪ್ರಿಯೆ;
ನಮ್ಮ ಬಂಧವು ಕ್ಷಣಭಂಗುರವಲ್ಲ:
ಎಲ್ಲವೂ ಎಲ್ಲೆಲ್ಲೂ ನಿರಂತರವುಂಟು.
ಆಕಾಶದೆತ್ತರದ ಗೋಡೆ, ಉಕ್ಕಿನ ಭಿತ್ತಿಗಳು
ನಿನ್ನ ನನ್ನ ಮಧ್ಯೆ ನಿಂತೊಂದು ಕಾರಣಕೆ
ನಮ್ಮೀ ಧಾತುಬಂಧದ ಕೊಂಡಿಯು ಕಳಚುವುದೆ?
ಒಡೆದಾತ್ಮದ ಭಿನ್ನ ಹೋಳು ತುಂಡುಗಳು ನಾವು,
ಪುನರಪಿ ಸಂಯೋಗದ ದಿವ್ಯ ಕ್ಷಣವನು ಕಾದು
ದಿನರಾತ್ರಿ, ಸಂವತ್ಸರಗಳ ಗುಂಟ ಕಾಯುವವರು;
ತಿಳಿದಿರು, ತಾಳ್ಮೆಗೆ ಜಯ ನಿತ್ಯ ಕಟ್ಟಿಟ್ಟ ಬುತ್ತಿ.
ನಾನು ನಿನ್ನಿಂದ ದೂರ ಖಂಡಿತ ಇಲ್ಲ,
ನಾ ನಿತ್ಯ ನಿರಂತರ ನಿನ್ನೊಡನೆ ಇರುವೆ;
ಅವ್ಯಕ್ತ ಭಾವನಾ ತಂತುಗಳ ಜಾಲಬಂಧ,
ಸುಪ್ತ ಕಿರಣ ಬಳ್ಳಿಗಳ ಅಲೌಕಿಕ ತರಂಗ
ನಿನ್ನ ನನ್ನ ಕೂಡಿಟ್ಟು ಮುನ್ನಡೆಸುತ್ತಿವೆ ನಮ್ಮ,
ಭೂತ ಸಂಪ್ರಾತದಿಂದ ನಮ್ಮ ಲಕ್ಷ್ಯದತ್ತ,
ದೂರದ ನಿನ್ನ ನನ್ನ ಭವ್ಯ ಭವಿಷ್ಯದತ್ತ.
ಗತಿಸಿದ ನಿರಾಶೆ ವೈಫಲ್ಯವೆ ಕೈಹಿಡಿವ ಶಕ್ತಿ,
ವರ್ತಮಾನದ ನೋವು ಸುಖಕೆ ಸೋಪಾನ;
ಕ್ರೂರ ಪ್ರಾರಬ್ಧದಿ ದೂರ ಬೇರ್ಪಟ್ಟ ನಮಗೆ,
ಆತ್ಮ ಕಿವಿಚುವ ಹರಿವ ನೋವುಂಡ ನಮಗೆ,
ಮುಂದೆ ನಡೆದಂತೆ ಸುಖ ಹಿತ ಎದುರಿಗಿದೆ,
ಮತ್ತೆ ಬೆರೆಯುವ ಪುಣ್ಯಕ್ಷಣ ಮುಂದೆಯಿದೆ -
ರಾತ್ರಿ ಬೆಳಗಾಗುವುದು ಸ್ಠೃಷ್ಠಿ ನಿಯಮ ತಾನೇ?
This poem has not been translated into any other language yet.
I would like to translate this poem