ಮಹಾ ತಪಸ್ಸು Poem by Praveen Kumar in Bhavana

ಮಹಾ ತಪಸ್ಸು

ಹೃದಯ ಭೃಂಗಾರದ ತುಂಬ ಪ್ರೀತಿಯಮೃತ ತುಂಬಿ,
ತನ್ನಾತ್ಮದ ಗುಡಿಯಲ್ಲಿ ಭಾಸುರ ನಂದಾದೀಪವ ಹಚ್ಚಿ,
ಪ್ರಣಯಾಕುಲಳಾಗಿ ಮೈತುಂಬ ತಾಮ್ರವಹ್ನಿಯ ಹೊತ್ತು
ಲಜ್ಜೆಯ ಭರದಲ್ಲಿ ಮೆಲ್ಲಮೆಲ್ಲನೆ ಘನ ಹೆಜ್ಜೆಯನಿಟ್ಟು
ಬಂದಳು ತಪಸ್ವಿನಿ ತನ್ನ ತಪದ ಪಾರಮ್ಯದ ಕೊನೆಗೆ.

ತಪಸ್ಸೇನೋ ಸಿದ್ಧಿಸಿತು, ಬಯಸಿದ್ದು ಬಳಿ ಬಂದಿತ್ತು,
ಆರಾಧಿಸಿದ ದೇವತೆಯೆ ಒಲಿದು ಕೈನೀಡಿ ಕರೆದಿದ್ದ;
ಸ್ವರ ಸ್ವರಸೇರಿ ಇನ್ನೇನು ಪ್ರಿಯ ಸಂಗೀತ ಬರಲಿರುವಾಗ,
ತಾಳ ತಪ್ಪಿ, ತಾನೊಲಿದ ದೇವರಿಗೆ ಭಂಗಬರದಿರಲೆಂದು
ಹಿಂದೆ ಸರಿದಳು ತಪಸ್ವಿನಿ, ನೋವನ್ನೊಳಗೊಳಗೆ ನುಂಗಿ.

ಕೈಗೆ ಬಂದ ಬಯಕೆಯ ಬಿಸುಟೋಡುವ ತಪಸ್ವಿನಿ ಮುಂದೆ,
ಬೇಡಿದನ್ನು ಕೊಡಲೆಂದು, ತಪಸ್ಸಿಗೊಲಿದ ದೇವರು ಹಿಂದೆ,
ವರ್ಷಾನುವರ್ಷ ನಡೆುತೀ ವಿಚಿತ್ರ ಸತ್ಯ ಸತ್ತ್ವ ಪರೀಕ್ಷೆ;
ಓಡೋಡಿ ದಣಿದು, ಕಣ್ಣೀರಲಿ ತೊಯ್ದ ತಪಸ್ವಿನಿ ಕೊನೆಗೆ
ದಾರಿ ಕೊನೆಯ ಆಳ ಕಂದರದೊಡಲಿಗೆ ನೂಕಿದಳು ತನ್ನ.

ತತ್ತರಿಸಿದ ದೇವ ತಪಸ್ವಿನಿಯ ತನ್ನ ಕೈಯಲ್ಲಿ ಹಿಡಿದೆತ್ತಿ,
ರಕ್ತವೊಸರುವ ಗಾಯಗಳ ತೊಳೆದೌಷಧಗಳ ಹಚ್ಚಿ,
ತಪೋವನದಲ್ಲಿಟ್ಟು ಉಪಚರಿಸಿ ಶುಶ್ರೂಷೆ ಸೇವೆಗೈದ;
ಎಚ್ಚೆತ್ತ ತಪಸ್ವಿನಿಯು ತನ್ನೆದುರು ತನ್ನ ದೇವರನು ಕಂಡು,
ಮತ್ತೆ ಸರಿದಳು ಹಿಂದೆ ನೋವನ್ನೊಳಗೊಳಗೆ ನುಂಗಿ.

ಕೂಡಿದರೆ ಪರಮ ಸುಖ, ತೃಪ್ತಿ, ತಪಸ್ಸಿನ ಸಾರ್ಥಕ್ಯ,
ಹಿಂಜರಿದರೆ ಹತಾಶೆ, ಭ್ರಮ ನಿರಸನ, ರೌರವ ನರಕ;
ತಾಳ ತಪ್ಪಿ, ತಾನೊಲಿದ ದೇವರಿಗೆ ಭಂಗಬರದಿರಲೆಂದು
ಹಿಂದೆ ಸರಿದಳು ತಪಸ್ವಿನಿ, ನೋವನ್ನೊಳಗೊಳಗೆ ನುಂಗಿ;
ಇದಲ್ಲವೆ ಪ್ರೀತಿಗೆ ಪ್ರೀತಿ ಬಲಿಕೊಡುವ ಮಹಾ ತಪಸ್ಸು?

Wednesday, July 12, 2017
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success