ಪ್ರೇತಕಳೆ Poem by PRAVEEN KUMAR Kannada Poems

ಪ್ರೇತಕಳೆ

ಮಿಂಚು, ಗುಡುಗು, ಬಿರುಗಾಳಿಯ ಬಳಿಕ,
ಧಾರಾಕಾರ ಮಳೆ, ನೆರೆ ಪ್ರವಾಹದ ಬಳಿಕ,
ಎಲ್ಲವೂ ನಿಶ್ಶಬ್ಧ ಈಗ.

ಮೋಡವಿಲ್ಲದ ನೀರಸ ಆಕಾಶದ ಕೆಳಗೆ,
ಸ್ತಬ್ಧ ಗಾಳಿಯ ನಿರ್ಜೀವತೆಯ ಒಳಗೆ
ಈಗ ಸ್ಮಶಾನ ಮೌನ.

ಧಾರಾಕಾರ ಮಳೆ, ಪ್ರವಾಹಗಳು, ಹೊಳೆ,
ಭಯಾನಕ ಗುಡುಗು ಸಿಡಿಲಿನಾರ್ಭಟ
ಬರೆ ಕನಸು ಈಗ.

ಮಿಂಚಿನ ಝಳ, ಬಿರುಗಾಳಿ ಸುಳಿಯಲ್ಲಿ
ತತ್ತರಿಸಿ ನಡುಗಿದ ನಮ್ಮ ಈ ಜೀವಕ್ಕೆ
ಇದು ವಿಶ್ರಾಂತ ಕಾಲ.

ಗಾಳಿ ಸುಳಿಯಲಿ ಕುಣಿದಾಡಿದ ಗಿಡಮರ
ಜೀವಚ್ಛವವಾಗಿ ದೀರ್ಘ ನಿದ್ರೆಯಲ್ಲಿದ್ದು
ಪ್ರೇತಕಳೆ ತುಂಬಿದೆ ಸುತ್ತ.

ಮೈಗಟ್ಟುವ ಚಳಿ, ಮನ ಹಿಂಡುವ ನೋವು,
ಸುತ್ತಲೂ ಹರಡಿರುವ ಶೀತಲ ಬೆಳಕಲ್ಲೂ
ನಿಶ್ಚೇತನದ ಮಸುಕು.

ಚಂದ್ರನನ್ನೇ ಮರೆತ ಕಾರ್ಗತ್ತಲಿನ ಹಾಗೆ,
ಹೂವು ಹಣ್ಣು ಹೊರದ ಪೊದೆಯಂತೆ
ನಾನು ಬೀಳುಜೀವಿಯಾದೆ.

ಮಿಂಚಾಗಿ ಬಂದು ಸಿಡಿಲಾಗಿ ಗುಡುಗಿದವಳು,
ಬಾಳಲ್ಲಿ ಮಿಂಚು ಬಿರುಗಾಳಿ ತಂದವಳವಳು
ಈಗ ಕಣ್ಣೆದುರೇ ಇಲ್ಲ.

ಪ್ರೀತಿಯ ಧಾರಾಕಾರ ಮಳೆಯಲಿ ತೊಯ್ದು,
ಸುಖದ ಪ್ರವಾಹದಲ್ಲೆನ್ನ ಕೊಚ್ಚಿ ಹೋದವಳ
ಈಗ ಕುರುಹೇ ಇಲ್ಲ.

ಈ ಶಿಶಿರ, ಈ ಬೀಳುಕಾಲ, ದುರ್ವಿಧಿಯಲ್ಲಿ
ನಾನಿಲ್ಲಿ, ಅವಳಲ್ಲಿ ದೂರ, ನಮ್ಮಿಬ್ಬರ ನಡುವೆ
ಹೆಪ್ಪುಗಟ್ಟುವ ನೋವು.

ಅನಿಶ್ಚಿತತೆಯ ನೋವಿನ ನಾವೆಯಲಿ ನಾನು,
ಅವಳೆಲ್ಲಿ, ಹೇಗೆಂಬ ವಾರ್ತೆಗೆ ಹಂಬಲಿಸಿ
ಚಡಪಡಿಸುತ್ತಿರುವೆ.

ನನ್ನ ಹಿತ ಬಯಸಿ ದೂರವಾದಳು ಅವಳು,
ನನ್ನ ಕರೆಯನು ಮೀರಿ ಓಡಿದಳು ದೂರ,
ತನ್ನಾಶೆಯನು ತುಳಿದು.

ನನ್ನನ್ನೂ ಹೊರಗಿಟ್ಟು, ಎಲ್ಲ ದಾರಿಗಳ ಮುಚ್ಚಿ,
ಇದ್ದ ಬಾಗಿಲನೂ ಅವಳು ಝಡಿದಿರುವಾಗ,
ಅಸಾಹಯಕನು ನಾನು.

ಇದ್ದುದನ್ನೆಲ್ಲ ಬಿಸುಟು, ಪ್ರಘೋರ ತಪಸಿನಲಿ
ತನ್ನನ್ನವಳು ಹಿಂಡಿ ಹಿಂಡಿ ಸುಡುತ್ತಿರುವಾಗ,
ಹೇಗೆ ಸಹಿಸಲಿ ನಾನು?

ಅವಳ ಧ್ಯಾನದ ಕೇಂದ್ರ ನಾನಾಗಿರುವಾಗ,
ಅವಳ ಆರ್ತ ಕರೆ ನನ್ನ ತಲಪುತ್ತಿರುವಾಗ,
ಏನನ್ನೂ ಮಾಡಲಾರೆನಲ್ಲ.

ಕಾಲಗರ್ಭದ ಸಾವಿರ ಪದರುಗಳ ಒಳಗೆ
ಅವಳು ಜಿಗಿದು ದೂರ ಜಾರುತಿರುವಾಗ,
ನಾನು ಸುಮ್ಮನಿರುವೆನಲ್ಲ.

ಭೂತ ಭವಿಷ್ಯತ್ತುಗಳ ಬೇತಾಳಗಳ ನಡುವೆ
ಹುದುಗಿದ ವರ್ತಮಾನದ ನಿರ್ಜೀವತೆಯು
ತೊಲಗುವುದು ಎಂದೋ?

ಅರಿವು ಮೀರಿದ ದೂರದಲಿ ನಾವಿದ್ದರೂ ಈಗ,
ಆಂತರ್ಯದಲ್ಲಿನ್ನೂ ನಾವು ಒಂದಾಗಿರುವಾಗ
ನಮಗೇನು ಚಿಂತೆ?

ಇಂದಲ್ಲವಾದರೆ ನಾಳೆ ಅವಳು ಬರುವುದು ಸತ್ಯ,
ನನ್ನ ಮತ್ತವಳ ಈ ದಿವ್ಯ ಸಂಬಂಧವು ನಿತ್ಯ -
ಇದೇ ನಮ್ಮ ಆಸ್ತಿ.

Wednesday, July 12, 2017
Topic(s) of this poem: love
COMMENTS OF THE POEM
READ THIS POEM IN OTHER LANGUAGES
Close
Error Success