ನಮ್ಮ ದಿವ್ಯ ಗುರಿಯತ್ತ Poem by PRAVEEN KUMAR Kannada Poems

ನಮ್ಮ ದಿವ್ಯ ಗುರಿಯತ್ತ

ಹಲವು ಲೋಕ ನಿಹಾರಿಕೆಗಳನು ಜಿಗಿದು ಹಾರಬಲ್ಲ ಹಕ್ಕಿ,
ನನ್ನೂರಿನ ಪುಟ್ಟ ದಿಗಂತವನು ದಾಟಿ ಬರಲೊಲ್ಲೆ ಯಾಕೆ?
ಹಲವು ನೆಲೆಗಳ ಮೀರಿ ದೇವಲೋಕಕ್ಕೇರಬಲ್ಲ ಓ ಬೆಂಕಿ,
ನಿನಗೆ ಮುಡಿಪಾದ ನನ್ನ ಹೃದಯದೀಪ ಬೆಳಗಿಸಲೊಲ್ಲೆ ಏಕೆ?

ಸುನಾಮಿಯಾಗಿ ಖಂಡಾಂತರ ಪ್ರಸ್ಫುರಿಸಿದ ಕೋಪಾಟೋಪ,
ಕಾಳ್ಗಿಚ್ಚಾಗಿ ಊರೂರನ್ನೇ ಕಬಳಿಸಿದ ಪ್ರಳಯಾಂತಕ ತಾಪ
ನಾನೆದುರಾದಾಗ ತಂಗಾಳಿ ಗಂಧ ಸೌಗಂಧವಾಗಿ ತೀಡುವುದು,
ಬೆದರಿದ ಚಿಗರೆಯ ಹಾಗೆ ಹಿಮ್ಮೆಟ್ಟಿ ಹಿಂದೆ ಹಿಂದೆ ಓಡುವುದು.

ದಿಗಂತದಗಲದ ತುಂಬ ಆಕಾಶದೆತ್ತರಕೆ ಹಬ್ಬಿ ನಿಲ್ಲಬಲ್ಲ ನೀನು,
ನನ್ನ ಲೋಕದಲಿ ಸ್ಠೃಯ ಉದ್ದಗಲ ಮೀರಿ ಹಬ್ಬಬಲ್ಲ ನೀನು,
ಯಾವ ಮೋಡಿಯ ಸಬಲ ಕಾರಣಕೆ ಹೀಗೆ ನನ್ನಿರವನ್ನು ಮರೆತು
ಅಪೂರ್ವ ಸ್ಥರದಲ್ಲಿಟ್ಟು ನನ್ನನ್ನು ಕುಗ್ಗಿ ಮುದುಡುವೆ ನೀನು?

ಯಾವುದೋ ಕಾಣದಲೌಕಿಕ ತಂತು ಬಂಧಿಸಿದೆ ನಿನ್ನ ನನ್ನ,
ಯಾವುದೋ ವಿಶ್ವಕಾರಣಕೆ ನಮ್ಮ ಹಾುಸುತ್ತಿದೆ ಮುಂದೆ;
ವಿಶ್ವನಿಯಮವ ಮೀರಿ ನಾವು ಜೊತೆ ಕೂಡುವ ಹಾಗೂ ಇಲ್ಲ,
ಜೊತೆ ಸೇರದ ನೋವು ಹತಾಶೆಯಲಿ ಬೇರ್ಪಡುವ ಹಾಗೂ ಇಲ್ಲ.

ಹತಾಶೆಯ ಸಾಗರದಲ್ಲಿ ಆಶೆ ಭರವಸೆಯ ನಮ್ಮ ಒಂಟಿ ನೌಕೆ
ಮಳೆ ಬಿರುಗಾಳಿ ಸುಳಿಯಲ್ಲಿ ಪದೇ ಪದೇ ಗಿರಗಿರನೆ ತಿರುಗಿ,
ಭಯ ನಿರಾಶೆ ನೋವಿನಲಿ ನಾವು ರಕ್ತ ಕಣ್ಣೀರಿಳಿಸಿದುದೆಷ್ಟೋ,
ಹತೋಟಿಗೆ ಬಂದು ನಾವೆ ಮತ್ತೆ ಮುಂದೆ ಸಾಗಿದುದೆಷ್ಟೋ.

ಹತಾಶೆಯ ನಿಷ್ಕರುಣೆ ಹೊಡೆತದಲಿ ನಿನ್ನ ಭರವಸೆ ಕುಗ್ಗಿದೆ ಈಗ,
ನಿರಾಶೆಯ ತೆರೆಗಳ ಬಿಟ್ಟು ಬೇರೇನೂ ನಮಗೆ ಕಾಣಿಸದು ಎಲ್ಲೂ;
ಆಶೆಯ ಮಿಂಚುಹುಳದ ನಸು ಬೆಳಕಿನಲಿ ಕಾರ್ಗತ್ತಲೆಯ ಬಗೆದು
ಹುಟ್ಟು ಹಾಕಿ ಹಾಕಿ ಸೋತಿದೆ ನನ್ನ ದೃಢ ಬಾಹುಗಳು ಎರಡೂ.

ಒಡೆದ ನಿನ್ನ ಭರವಸೆಯ ಮತ್ತೆ ಚಿಗುರುವುದೇ ನನ್ನ ಹಿರಿದಾಶೆ,
ನಿನ್ನ ಉರುವಾಗಿ, ಬೆಳಕಾಗಿ ನಿನ್ನ ಮುನ್ನಡೆಸುವುದೇ ನನ್ನ ಗುರಿ;
ಕಣ್ಣೀರಿನಲಿ ತೊಯ್ದ ಕಣ್ಣಿಂದ ನನ್ನ ದಾರಿ ಕಾಣದಾಗಿದೆ ನಿನಗೆ,
ನಾನು ಮುನ್ನಡೆಸಿದಷ್ಟೆ ನೀನು ದಿನ ದಿನವೂ ಹಿಮ್ಮೆಟ್ಟಿ ನಿಲುವೆ.

ಹಲವು ಲೋಕ ನಿಹಾರಿಕೆಗಳನು ಜಿಗಿದು ಹಾರಬಲ್ಲ ಹಕ್ಕಿ,
ಎಲ್ಲ ಎಡಬಲ ಎಸೆದು ವಿರಾಗದ ವಿರಕ್ತ ಸನ್ಯಾಸಿನಿಯಾಗಿ
ಹೀಗೆ ನಿಂತರೆ ನೀನು ಹೇಗೆ ಸಹಿಸಲಿ ಬದುಕಲಿ ನಾನು,
ಕಂಗೆಡಬೇಡ ದೇವಿ, ವಿಶಾಲವಿದೆ ಲೋಕ, ಮುಂದಿದೆ ಬೆಳಕು.

ನನ್ನ ಲೋಕದಲಿ ಸ್ಠೃಯ ಉದ್ದಗಲ ಮೀರಿ ಹಬ್ಬಬಲ್ಲ ನೀನು,
ಹೀಗೆ ಮುದುಡಿ ಕೊರಗಿ ನಿನ್ನವನಿಂದ ದೂರ ಸರಿದರೆ ಹೀಗೆ,
ಹತಾಶೆಯ ಸಾಗರದ ಗುಂಟ ಆಶೆ ಭರವಸೆಯ ನಮ್ಮ ನೌಕೆ
ಹೇಗೆ ಸಾಗಿಸುವುದು ಮುಂದೆ ನಮ್ಮನ್ನು ದಿವ್ಯ ಗುರಿಯತ್ತ?

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success