ನನ್ನವಳು Poem by PRAVEEN KUMAR Kannada Poems

ನನ್ನವಳು

ದುಂಡು ಮಲ್ಲಿಗೆ ನೀನು, ಸೌಗಂಧ ಕಾಶಿ,
ದೈವೀಕ ಸುವಾಸನೆಯ ಶುಭ್ರ ರಾಶಿ;
ಹೊರಗೆ ಬಿಡದೆ, ಒಳಗಡುಮಿಟ್ಟು ಜೀವ
ನಿನ್ನಿರವನಡಗಿಸುವೆ ಏಕೆ ನನ್ನಾತ್ಮ, ಜೀವ?

ನೀನಿದ್ದರೆ ಬೆಳಕು, ಸಂಗೀತ, ಭಕ್ತಿ, ಆರಾಧನೆ,
ನಿನ್ನ ವಿನಹ ಸ್ವರ್ಗವು ಬರೆ ನೋವು, ವೇದನೆ,
ಬಾ ನನ್ನೊಲವೆ, ನಿನ್ನೆಲ್ಲವನು ತೆರೆದು ಕೂಡೆ ಬಾ,
ಬಯಲಾಗಿ ಬೆಸೆಯಲು ಸೌಗಂಧ ಚೆಲ್ಲುತ್ತ ಬಾ.

ನೀನೆಲ್ಲಿದ್ದರೂ ನಿನ್ನ ಸೌಗಂಧ ಕರೆಯುವುದು ನನ್ನ,
ನಿನ್ನೊಳಗು ಹೊರಗಿನ ಕತೆಯ ಬಿಡಿಸಿಟ್ಟು, ಚಿನ್ನ,
ನಿನ್ನ ನನ್ನ ಬಂಧದ ಒಂದೊಂದೆಳೆಯನ್ನು ತೆರೆಯುತ್ತ
ಇದಲೌಕಿಕವೆಂದು ಪಿಸುಗುಟ್ಟುತ್ತಿದೆಯಲ್ಲ ಸುತ್ತಮುತ್ತ.

ನೀನೊಂದು ಪವಾಡ, ನಿನ್ನ ಸೌಗಂಧ ಪವಾಡ,
ನಿನ್ನೊಂದೊಂದು ಹೆಜ್ಜೆ ಮೈನವಿರೇಳಿಸುವ ಪವಾಡ;
ನಿನ್ನನುರಾಗದ ಸೆಳೆಯಲ್ಲಿ ಪವಡಿಸಿರುವ ನನಗೆ
ಸುಖದಮೃತ ಸೇಂಚನೆಗಾಗಿ ಬಾ ಒಲವೆ ಬಳಿಗೆ.

ನಿನ್ನಾತ್ಮದ ವಿದ್ಯುಲ್ಲತೆಯಿಂದ ಬಿಗಿ ಬಳಸಿ ನನ್ನ,
ಹೃದಯ ಕಮಂಡಲದಲ್ಲಿಟ್ಟು ಪೂಜಿಸುವೆ ನನ್ನ;
ನಿನ್ನ ತಪೋಭಾವದಲಿ ಬೆಂದು ಪ್ರಾಕ್ಷಾಲಿಸಿದ ನನ್ನ
ಆತ್ಮದಲ್ಲಿಟ್ಟು ನಿನ್ನನ್ನೆ ಪ್ರೀತಿಯಲ್ಲರ್ಪಿಸುವೆ ಚಿನ್ನ.

ನೀನಮೃತದ ಕುಂಡ, ಶುಭ್ರ ಚೆಲುವಿನ ಮೂಲ,
ಒಳ ಹೊರಗಿನ ನಿರ್ಬೇಧ, ಪ್ರಾಮಾಣಿಕ ದುಕೂಲ;
ನಿನ್ನೊಲವಿನ ಹೊಳೆಯಲಿ ಮಿಂದ ಜೀವನ ಧನ್ಯ,
ನನ್ನ ಸುಕೃತ ಫಲ, ನನ್ನನವರತ ಭಾಗ್ಯ ಅನನ್ಯ.

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success