ಪ್ರಿಯ ಚೈತ್ರ ತಪಸಿಯಾದೆ Poem by PRAVEEN KUMAR Kannada Poems

ಪ್ರಿಯ ಚೈತ್ರ ತಪಸಿಯಾದೆ

ನೀನು ಪಟ್ಟ ಕಷ್ಟಗಳ, ನೀನು ತ್ಯಜಿಸಿದಿಷ್ಟಗಳ
ನೋಡಿ ನಾನು ತಿಳಿಯನೇನು?
ನಿನ್ನ ತಪಸಿನಾಳವನ್ನು, ಘೋರ ಏಕಾಗ್ರಚಿತ್ತವನ್ನು
ಬೇರೆ ಯಾರೊ ಹೇಳಲೇನು?

ನಿನ್ನದಾಗಿ ಕೂಡಿಬಂದ ಸಕಲ ಸವಲತ್ತುಗಳ
ತಿರುಗಿ ಕೂಡ ನೋಡದವಳು,
ಎದುರು ಬಿದ್ದ ಅಗ್ನಿಯಲ್ಲಿ ಕಣ್ಣು ತೆರೆದು ಹಾರಿದವಳು,
ನಿನಗೆ ಸರಿದೊರೆ ಇರುವರೇನು?

ರಾಧೆಸೀತೆಯಾದಿಯಾಗಿ, ಗಿರಿಜೆ ತಪಸ್ಸು ಮೊದಲುಗೊಂಡು
ತ್ಯಾಗ ಪ್ರೀತಿ ಓದಿದವನು,
ನಿನ್ನ ಪ್ರೀತಿ ತ್ಯಾಗ ನೋಡಿ, ಓದಿದೆಲ್ಲ ಗೌಣವೆಂದು
ನಿನ್ನೆದುರು ಮೂಖನಾದೆ.

ಪ್ರೀತಿಗಾಗಿ ಕಣ್ಣುಮುಚ್ಚಿ ನರಕದಾಳ ಜಿಗಿದೆ ನೀನು,
ನಿರ್ವಾತದಲ್ಲಿ ಉಸಿರು ಹಿಡಿದೆ;
ತ್ಯಾಗದಿಂದ ಪ್ರೀತಿಗೊಂದು ಚಿನ್ನ ಕಟ್ಟು ಕಟ್ಟಿ ಕೊಟ್ಟೆ,
ಪ್ರಿಯ ಚೈತ್ರ ತಪಸಿಯಾದೆ.

ನಿನ್ನ ಪ್ರೀತಿ ತಪಸಿನಿಂದ, ನಿನ್ನ ತ್ಯಾಗ ಜ್ಯೋತಿುಂದ
ಬೆಳೆದು ನಿಂತ ಜೀವ ನಾನು,
ನಿನ್ನ ಪ್ರೀತಿಗಾಗಿ ನಾನು ನನ್ನ ಜೀವ ಮುಡಿಪು ಇಡುವೆ,
ನಿನ್ನ ನೆನಪಿನಲ್ಲೆ ನಡೆವೆ.

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success