ಬೆಸೆದ ಬೇರುಗಳು Poem by PRAVEEN KUMAR Kannada Poems

ಬೆಸೆದ ಬೇರುಗಳು

ನೀನಾರೋ ನಾನಾರೋ ನನಗೊಂದೂ ತಿಳಿದಿಲ್ಲ,
ನಿನ್ನ ಬೇರುಗಳೆಷ್ಟು ದಟ್ಟ ಬಿಗಿದುಕೊಂಡಿದೆಯೋ,
ಭೂತಳದಾಳದಲ್ಲಿಳಿದು ಬೆಳೆದು ಸುತ್ತಿ ಸುತ್ತಿ ಹಿಡಿದಿದೆಯೋ
ನನಗೆ ನಿನಗಿದಾವುದರ ಪರಿಚಯ ಕಿಂಚಿತ್ತು ಇಲ್ಲ.

ಹೊರಹಬ್ಬಿದ ಕೊಂಬೆರಂಬೆ ಎಲೆಗಳು ತಬ್ಬಿ ಹಿಡಿದಾಗ,
ಫ಼ಲಪುಷ್ಪಗಳು ಪರಸ್ಪರರ ಸಾನ್ನಿಧ್ಯಕ್ಕೆ ತವಕಿಸಿದಾಗ,
ಇನ್ನಿಲ್ಲದಿದೆಲ್ಲಿಂದ ಬಂತೆಂದು ನಾನು ಕೌತುಕಗೊಂಡದ್ದಿದೆ,
ಪ್ರಕೃತಿಯ ವಿಲಕ್ಷಣತೆಗೆ ದಿಗಿಲಾಗಿ ಮೂಕಗೊಂಡದ್ದಿದೆ.

ನಾವೇನೂ ಮರುಭೂಮಿಯಲ್ಲೆದ್ದ ವಿಲಕ್ಷಣ ಗಿಡಗಳಲ್ಲ,
ದಟ್ಟ ಕಾಡಿನ ನಡುವೆ ಬಲ್ಲಿಮರಗಳ ಮಧ್ಯೆ ಬೆಳೆದವರು;
ಒಡನಾಟ ತುಡಿದಾಟ ಕಡಿದಾಟಗಳನೆಲ್ಲೆಡೆ ಕಂಡವರು,
ನಮ್ಮಲ್ಲಿನ ಬೆಸೆತನದೀ ಬಿಗಿತನ ಮಾತ್ರ ನನ್ನರಿವಿಗೆ ಹೊರತು.

ನಿನ್ನನನ್ನುಸಿರು ಹೃದಯಬಡಿತಗಳು ಮೇಳಯಿಸಿದಾಗ,
ಪರಸ್ಪರರ ಸಾನ್ನಿಧ್ಯಕ್ಕೆ ನಮ್ಮಾತ್ಮ ತವತವಕಿಸಿದಾಗ,
ನಾವಿಬ್ಬರು ಒಂದೆಂಬವ್ಯಕ್ತ ಸೆಳೆತ ನಮ್ಮನ್ನಾವರಿಸಿದಾಗ
ನನ್ನೊಳಗಿನುಬ್ಬರದಬ್ಬರಕೆ ನಾನೇ ವಿಸ್ಮಿತನಾದುದ್ದಿದೆ.

ಹಲವು ಗೋಡೆಕಂದರಗಳ ನಡುವೆ ಬೇರ್ಪಟ್ಟ ನಾವು
ಒಬ್ಬರನ್ನೊಬ್ಬರು ಕಣ್ಣುಬಿಟ್ಟು ನೋಡಿದ ನೆನಪಿಲ್ಲ;
ನಮ್ಮದೇನಿದ್ದರೂ ಸುಪ್ತ ಒಳಕಣ್ಣಿನಂತರಂಗದೊರೆತ,
ಲೋಕಕಾಲದೊತ್ತಡ ಮೀರಿ ನಿಂತಾತ್ಮದ ತೀವ್ರ ಮೊರೆತ.

ಜ್ಞಾನವಿಜ್ಞಾನ ಧರ್ಮಧರ್ಮ ಲಾಭನಷ್ಟಗಳ ಲೆಕ್ಕ,
ಸುಖದುಃಖ ವಿಧಿವಿಧಾಯಕಗಳ ಪ್ರಥಕ್ಕರಣವಿಲ್ಲಿಲ್ಲ;
ಹಿಮಾಲಯಗಳ ಕೆಡೆದು, ಏಕದಿಕ್ಕಲ್ಲಿ ಹರಿವ ಪುಣ್ಯಗಂಗೆಗೆ,
ಬೆರೆತು ಮೇಳೈಸಿ ಕೈಹಿಡಿದು ಹರಿವುದೊಂದೇ ಲಕ್ಷ್ಯ.

ಆದರೆ ನೀನಾರೋ ನಾನಾರೋ ನನಗೊಂದೂ ತಿಳಿದಿಲ್ಲ,
ನಿನ್ನನನ್ನ ಬೇರುಗಳೆಷ್ಟು ದಟ್ಟ ಬಿಗಿದುಕೊಂಡಿದೆಯೋ ಗೊತ್ತಿಲ್ಲ;
ಆದರೂ ನಿನ್ನ ಬಿಟ್ಟು ನಾನಿಲ್ಲ, ನನ್ನ ಬಿಟ್ಟು ನೀನಿಲ್ಲ,
ನಾವಿಬ್ಬರೊಂದಾಗಿ ನಡೆವುದೇ ನಿನ್ನನನ್ನಸ್ತಿತ್ವ, ಲಕ್ಷ್ಯ.

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success