ನೀನೀಗ ನನ್ನ ಬರೆ ತಿರುವಿದ ಪುಟ Poem by Praveen Kumar in Bhavana

ನೀನೀಗ ನನ್ನ ಬರೆ ತಿರುವಿದ ಪುಟ

ಕೈಜಾರಿ ನೀನು ದೂರವಾಗುವಾಗ,
ಮನಸಲ್ಲಿ ನೆನಪು ಮಸುಕಾಗುವಾಗ,
ಭರವಸೆ ಭವಿಷ್ಯಗಳು ಪೊಳ್ಳೆನಿಸಿದಾಗ,
ನೀನೀಗ ನನ್ನ ಬರೆ ತಿರುವಿದ ಪುಟ,
ಕನಸಲ್ಲಿ ಕಂಡ ಬರೆ ಕಲ್ಪನೆಯ ಕೂಟ.

ಜೊತೆಜೊತೆಯ ನಮ್ಮ ಆ ಬಣ್ಣದಾಟ,
ಆಶೆ ಆಕಾಂಕ್ಷೆಗಳ ಮಿತಿಮರೆತ ಓಟ,
ಆ ಕನಸು ಈಗ ಬರೆ ಕನಸಾಯಿತಲ್ಲ;
ಆಶೆ ಆಕಾಂಕ್ಷೆಗಳು ಮರೀಚಿಕೆಯ ಹಾಗೆ
ನನ್ನಿಂದ ದೂರ ದೂರ ಸರಿಯಿತಲ್ಲ.

ಮೈತಾಳಿ ಎದುರು ನಿಂತಿದ್ದ ನೀನು
ನನ್ನೊಳಗೆ ನಿರ್ವಾತ ಹಬ್ಬುತ್ತಿರುವೆ;
ಹಿಂದಿದ್ದ ಬೆಳಕು ಕಸುವುಗಳು ಜಾರಿ,
ಏನೋ ಮಂಪರು ನನ್ನೊಳಗೆ ಸೇರಿ,
ಹಸಿವು ಬಾಯಾರಿಕೆ ನನಗಿಲ್ಲ ಈಗ,
ಹಗಲು ರಾತ್ರಿಗಳೆಲ್ಲ ಒಂದೆ ಈಗ.

ಏನಾದವು ಆ ದಿನದ ಆ ಬಣ್ಣದಾಟ -
ಆ ಕನಸು, ಉತ್ಸಾಹ, ಚೈತನ್ಯ ಚಿಲುಮೆ,
ಆ ಆಟ, ಓಟ, ಮೈನವಿರೇಳುವ ಹೂಟ,
ಒಡನಾಟ, ಸಖತನ, ಆ ಪ್ರೀತಿ, ಒಲುಮೆ.

ನೀನಿದ್ದಲ್ಲಿ ಬರೆ ನಿರ್ವಾತವೀಗ,
ನೀನೆನ್ನ ಬಂದು ಸೇರುವ ಹಾಗಿಲ್ಲ,
ಬೇರಾರನ್ನು ನಾ ಒಳ ಬಿಡುವುದಿಲ್ಲ;
ನೀನಾಡಿದಂತ ಆ ಕನಸು ಲೋಕ
ಕಪ್ಪಾಗಿ ದೊಪ್ಪನೆ ಬಿದ್ದಿದೆ, ಈಗ,
ಬೇರಾರೂ ಇನ್ನಲ್ಲಿ ಸೇರುವಂತಿಲ್ಲ.

ಹೋದ ಕಾಲದುತ್ಸಾಹ ಸ್ವಲ್ಪವೂ ಇಲ್ಲ,
ಮುಂದಿನ ಕಾಲದ ಭರವಸೆಯೂ ಇಲ್ಲ;
ಮಧ್ಯೆ, ಕಾಲದ ದೈತ್ಯ ಹಿಡಿತದೊಳಗೆ
ಮರಳುಗಾಡಿನ ಬಿರುಸುಳಿಯ ಹಾಗೆ
ದಿಕ್ಕನ್ನೆ ಮರೆತು ನಾ ಉರುಳುತ್ತಿರುವೆ.

ಬದುಕುವ ಪ್ರೇರಣೆಯು ನನಗಿನ್ನೆಲ್ಲಿ?
ಬದುಕುವಾಸೆ ನನಗೆ ಕಿಂಚಿತ್ತೂ ಇಲ್ಲ;
ಎದೆ ಬಡಿತದ ಆ ಜತನವನು ಮರೆತು,
ಅಂತರಾತ್ಮ ಒಳಗೊಳಗೆ ಮಾಸಿದಂತೆ,
ಬರಿ ಯಂತ್ರವಾಗಿ ನಡೆಯುತ್ತಿರುವೆ.

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success