ಮತ್ತೆ ಗೂಡು ಸೇರಬೇಕು Poem by Praveen Kumar in Bhavana

ಮತ್ತೆ ಗೂಡು ಸೇರಬೇಕು

ಹಕ್ಕಿ ಹಾರಿ ಹೋದರೇನು, ಮತ್ತೆ ಗೂಡು ಸೇರಬೇಕು,
ನೀನು ದೂರವಾದರೇನು, ನನ್ನ ಬಳಿಗೆ ಬರಲೆಬೇಕು,
ಕಾಣದಂತ ತಂತಿಯೊಂದು ನಿನ್ನ ನನ್ನ ಕಟ್ಟಿರುವಾಗ
ಬಂಧ ಬಿಚ್ಚಿ ಹೇಗೆ ನೀನು ಹೀಗೆ ನನ್ನ ಬಿಡಲು ಸಾಧ್ಯ?
ಅಸ್ತನಾದ ಸೂರ್ಯ ಮತ್ತೆ ಪೂರ್ವದಿಂದ ಬರುವ ಹಾಗೆ,
ಗಗನಗ್ರಸ್ತನಾದ ಚಂದ್ರ ಹುಣ್ಣಿಮೆಯ ತರುವ ಹಾಗೆ,
ನೀನೆಷ್ಟು ದೂರ ಅದೆಷ್ಟು ಕಾಲ ನಿನ್ನಿಷ್ಟದಂತೆ ಹಾರಿದರೂ
ಕೊನೆಗೊಂದು ದಿನ, ಮತ್ತೆಲ್ಲ ಮರೆತು, ನಿನ್ನ ಗೂಡು ಸೇರಬೇಕು,
ಕೂಡಿ ನಾವು ಗೂಡಿನಲ್ಲಿ ಕೂಡಿಯಾಡಿ ಮೆರೆಯಬೇಕು.

ದಿಗಂತದತ್ತ ದೃಷ್ಠಿಯಿಟ್ಟು ನನ್ನ ಬಿಟ್ಟು ಹಾರಿದಾಗ,
ಪುಕ್ಕ ಬಿಚ್ಚಿ ದೂರ ಸರಿದು ನನಗೆ ಶುಭ ಹಾರೈಸಿದಾಗ,
ಮೂಕನಾದ ನಾನು ನಿನ್ನ ಗಮನವನ್ನು ತಡೆಯದಾದೆ;
ಯಾಕೆ ಹೀಗೆ, ಹೇಗೆ ಹೀಗೆಯೆಂಬ ಸುಳಿವು ಬರದ ಹಾಗೆ,
ಕಣ್ಣನೀರು ಅಡಗಿಸಿಟ್ಟು, ನೀನು ದೂರ ಹಾರಿ ಹೋದೆ,
ನನ್ನನಿಲ್ಲಿ ನಡುನೀರಿನಲ್ಲಿ ಕೈಯಬಿಟ್ಟು ಮಾಯವಾದೆ;
ನೀನು ಹಿಂದೆ ಬರುವಿಯೆಂದು ದಿನ ರಾತ್ರಿ ಕಾದದೆಷ್ಟು,
ಕಣ್ಣಿನಲ್ಲಿ ಕಣ್ಣನಿಟ್ಟು, ದಿಗಂತದತ್ತ ಕಣ್ಣುನೆಟ್ಟು
ನಿನ್ನ ಬರುವಿಗಾಗಿ ನಾನು ದೇವರನ್ನು ಬೇಡಿದೆಷ್ಟು!

ಹಲವು ವರ್ಷ ಕಳೆಯಿತೀಗ, ನಿನ್ನ ಒಂದೂ ಸುಳಿವುಯಿಲ್ಲ,
ನೀನು ಮತ್ತೆ ಬರುವಿಯೆಂಬ ದೂರದಾಶೆಯಿಟ್ಟುಕೊಂಡು,
ಇನ್ನೂ ನಾನು ಬದುಕುತ್ತಿರುವೆ, ನಿನ್ನ ದಾರಿ ಕಾಯುತ್ತಿರುವೆ;
ಅದೆಷ್ಟು ದೂರ ಹೋದರೇನು, ಅದೆಷ್ಟು ಕಾಲವಾದರೇನು,
ನೀನು ನನ್ನ ಮರೆಯಲಾರೆ, ನಮ್ಮ ಬಂಧ ಕಡಿಯಲಾರೆ;
ಕಾಲಪದರಿನಲ್ಲಿ ಬೆಂದು, ನಾನು ನಾನಾಗಿಲ್ಲ ಈಗ,
ಹಿಂದಿದ್ದ ಕಸುವು, ಓಜಸ್ಸು, ಓಘ ಇಲ್ಲಿ ಈಗ ನನಗೆ ಇಲ್ಲ;
ಹೋದ ನೀನು ಬರಲೆ ಬೇಕು, ಮತ್ತೆ ಗೂಡು ಸೇರಬೇಕು,
ಎಂಬ ಒಂದೆ ಆಶೆಯಲ್ಲಿ ನಾನು ಜೀವ ನೂಕುತ್ತಿರುವೆ.

Friday, July 14, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success