ಅಡಕತ್ತರಿ ಮಧ್ಯೆ Poem by Praveen Kumar in Bhavana

ಅಡಕತ್ತರಿ ಮಧ್ಯೆ

ನೀನೆಷ್ಟು ದೂರ ಹೋದರೇನು,
ಕೊನೆಗೊಂದು ದಿನ ನೀನು ಬರಲೆ ಬೇಕು,
ಬಂದೊಂದು ದಿನ ನನ್ನ ಸೇರಲೆ ಬೇಕು;
ನೀನೆಲ್ಲಿ ಗುಪ್ತಗಮನದಿಂದ
ಪಾತಾಳದಾಳ ತಳದಲ್ಲೆಲ್ಲೋ ಹುದುಗಿದರೂ,
ಹೊರಬಂದೊಂದು ದಿನ ನಾವು ಕೂಡಬೇಕು,
ಇದು ದಿವ್ಯ ಲೋಕನಿಯಮ,
ನಿನ್ನನನ್ನ ಮೀರಿನಿಂತ ಪ್ರಕೃತಿಯ ವಿಧಿವಿಧಾನ,
ನಿನ್ನನನ್ನ ಪರಿಕ್ರಮಣದ ಪರಮಾರ್ಥ ದಿವ್ಯ ಮಾನ.

ಬರುವೆನೆಂದು ಹೋದವಳು
ಬಂದು ಕಂಡು ನನ್ನನೊಮ್ಮೆ ಬಿಗಿದಪ್ಪಿದವಳು,
ಒಳಹೊರ ಕಣ್ಣಾಡಿಸಿ ಸ್ಥಿತಿಯನ್ನು ಗ್ರಹಿಸಿದವಳು
ಹೀಗೆ ಹೊರ ನಡೆಯಬೇಕೆ,
ಕರೆದೆಳೆದರೂ ಬರದೆ ಹಾಗೆ ದೂರ ಓಡಬೇಕೆ?
ಕರುಳು ಹಿಚುಕುವ ನೋವ ಒಳಗೊಳಗೆ ಹಿಡಿದು
ತಪ್ಪಿ ಕೂಡ ನನ್ನ ನೋಡದೆ
ಎಡವಿ ಎದ್ದು, ಕಲ್ಲು ಮುಳ್ಳು ಹಾವುನೋವಿನ ಹಾದಿ ಹಿಡಿದು
ಒಂದುಸಿರಲ್ಲೆ ದೂರ ನೀನೋಡುವಂತ ತುರ್ತು ಇತ್ತೇ?

ಈಗ ನೋಡು ಮುಸುಕು ಮುಸುಕಿದೆ,
ಬೆಳಕು ಹರಿದು, ಸೂರ್ಯಾಸ್ತಮಾನ, ಕತ್ತಲಡರಿದೆ,
ಕಾಣದಂತ ದೂರದಲ್ಲೂ ನಿಂತು ಚಿಂತಿಸುವ ಕಾಲ;
ಹಲವು ಮಜಲಿನಾಳದಲ್ಲಿ
ನಿನ್ನ ನನ್ನ ಬಂಧಬಳ್ಳಿಯ ಆಳವನ್ನರಿತ ನಾನು,
ಯುಗಾಂತರದ ಪ್ರತೀಕ್ಷೆಯಲ್ಲಿ ನೋವನುಂಡ ನಾನು
ಮರೆತಿದ್ದೆ ನಿನ್ನ ಕ್ಷಣ ಕಾಲ,
ನೆನಪು ಮರುಕಳಿಸಿದಂತೆ ಓಡೋಡಿ ನಿನ್ನನಪ್ಪಿದ್ದೆ,
ಅಜ್ಞಾತ ನಿದ್ರೆಯಲ್ಲಿ ನೀನಾಗ ಅಯ್ಯೋ ಎಲ್ಲ ಮರೆತಿದ್ದೆ.

ಅಜ್ಞತೆಯಲ್ಲೂ ಬಿಗಿದಪ್ಪಿದವಳು
ಸರಿತಪ್ಪು ಜಿಜ್ಞಾಸೆಯಲ್ಲಿ ಇದು ತಪ್ಪೆಂದರಿತು
ಕರೆದೆಳೆದರೂ ಬರದೆ ನೀನು ದೂರ ನಡೆದೆ;
ನಾನು ಹೇಳುವಂತಿರಲಿಲ್ಲ,
ಹೇಳಿದರೂ ನೀನು ತಿಳಿಯುವ ಸ್ಥಿತಿಯಲ್ಲಿರಲಿಲ್ಲ,
ಅಡಕತ್ತರಿಯ ಮಧ್ಯೆ ಚಡಚಡಪಡಿಸಿದೆ ನಾನು;
ಎಲ್ಲ ತಿಳಿದಾಗ ನೀನು
ನನ್ನೊಳಗಿನ ನೋವು ದುಃಖ ತಿಳಿದೇನೆನ್ನುವಿಯೋ,
ನೀನನುಭವಿಸಿದ ಘೋರ ನೋವಿಗೇನೆನ್ನುವಿಯೋ?

Friday, July 21, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success