ಕಾವ್ಯ ವಿಪರ್ಯಾಸ Poem by Praveen Kumar in Bhavana

ಕಾವ್ಯ ವಿಪರ್ಯಾಸ

ಕಾವ್ಯಕ್ಕೆ ನವ್ಯ ನವೋದಯ ದಲಿತ
ಶಾಸ್ತ್ರೀಯ ಎಡಬಲ ಬೇಧವೇಕೆ?
ಕಾವ್ಯ ರಸಿಕ ಸತ್ಯಾನ್ವೇಷಣೆಯಲ್ಲಿ
ಮತೀಯ ಜಾತ್ಯತೀತ ಪಂಥ ಬೇಕೆ?

ಮತಬೇಧ ಪಂಥ ಒಡಕಿನ ಮೂಲ,
ಜನಜನ ಮನ ಒಡೆಯುವ ವಿದ್ರೋಹ;
ಅದು ಕಾಲಾತೀತ ಸತ್ಯದ ವ್ಯಭಿಚಾರ,
ಕಾವ್ಯತತ್ತ್ವಕ್ಕೆ ನಡೆಸುವ ಘೋರಪಚಾರ.

ಕಾವ್ಯದ ಹೆಸರಲ್ಲಿ ನಡೆಯದ ಪಾಪವಿಲ್ಲ,
ಕಾವ್ಯಾಸವಾರಿಯಲ್ಲಿ ಹಾಕದ ಶಾಪವಿಲ್ಲ;
ಕಾವ್ಯವು ಸಿಹಿ ಹಾಲು, ಹಾಲಾಹಲವಲ್ಲ,
ರಸಿಕಪ್ರಜ್ಞೆಯ ಮಧ್ಯೆ ದ್ವೇಷ ಹೇಗೆ ಸಾಧ್ಯ?

ಕಾಲಕಾಲ ಬೇಧ, ಜನಜನ ಪಥ ಬೇಧ,
ಭಾಷೆಭಾಷೆ ಪ್ರಬೇಧ, ಪ್ರಕಾರಗಳ ಬೇಧ;
ರಸಿಕ ಕಾವ್ಯದಲ್ಲಿ ಈ ಬೇಧ ಹೇಗೆ ಸಾಧ್ಯ?
ಒಡಕಿನ ನಡುವೆನೆ ಸತ್ಯ ಸಾಧನೆ ಅಸಾಧ್ಯ.

ನನ್ನ ಭಾಷೆ, ನನ್ನ ದೇಶವೆ ದೊಡ್ಡದು,
ನನ್ನ ಜಾತಿ ಪಂಥಕ್ಕೆ ಬೇರೆ ಸಾಠಿಯಿಲ್ಲ;
ಇದು ವಿಭಜಿಸಿ ಆಳುವ ರಾಜಕೀಯ ಸೂತ್ರ,
ಒಕ್ಕಟ್ಟು ಒಂದು ಒಮ್ಮತವೊಂದೆ ಕಾವ್ಯಮಂತ್ರ.

ವಿಘಟನೆಯೆ ಎಲ್ಲ ದ್ವೇಷದ ಮೂಲವಿರುವಾಗ,
ಒಗ್ಗಟ್ಟೊಂದರಲೆ ವಿಕಸನ ಸಾಧ್ಯವಿರುವಾಗ
ಕಾಲ ಪ್ರಕಾರ ಜಾತಿಪಂಥದ ಹೆಸರು ಕೊಟ್ಟ
ಕಾವ್ಯ ವಿಭಜನೆಯೆ ಕಾವ್ಯ ವಿಪರ್ಯಾಸ.

ಕಾವ್ಯಕ್ಕೆ ಕಾವ್ಯವೊಂದೆ ಏಕೈಕ ಪ್ರಕಾರ,
ಕಾವ್ಯವೊಂದರಲ್ಲೆ ರಸಿಕತೆಯ ಸಾಕಾರ;
ಅಲ್ಲೇ ಪರಮ ಸತ್ಯದ ಜ್ಞಾನದವಿಷ್ಕಾರ,
ಲೋಕದಲ್ಲೆಲ್ಲ ನಡೆವ ಕಾವ್ಯಚರ್ಯೆ ಇದೆಯೆ.

ಬರೆದುದೆಲ್ಲ ದೊಡ್ಡ ಕಾವ್ಯವಾಗುವುದಿಲ್ಲ,
ತಾಳಬಧ್ಧತೆ ಪ್ರಾಸ ಕಾವ್ಯ ತರುವುದಿಲ್ಲ;
ನೈತಿಕತೆಯ ಪಾಠ ಖಂಡಿತ ಕಾವ್ಯವಲ್ಲ,
ಒಳಮಿಂಚಿನ ಸಿಂಚನವೆ ಶ್ರೇಷ್ಠ ಕಾವ್ಯ.

Friday, July 28, 2017
Topic(s) of this poem: inspiration,poetry
COMMENTS OF THE POEM
READ THIS POEM IN OTHER LANGUAGES
Close
Error Success