ಜೀವ ಪಣವಾಗಿಟ್ಟು ನಾ ನಿನ್ನ ಹಿಂದೆ ಬಿದ್ದೆ,
ನೀನೆನ್ನ ಇಹಪರವೆನ್ನದೆ ಇದ್ದುದನ್ನೆಲ್ಲ ಕದ್ದೆ;
ಅದು ನಿನ್ನ ಹಕ್ಕೆಂದು ನಾನೂ ಸುಮ್ಮನಿದ್ದೆ,
ನೋಡಿಲ್ಲಿ ನಾನೀಗ ನಿರ್ವಾತದಲಿ ಸಿಕ್ಕಿಬಿದ್ದೆ.
ನೀನಾರೊ ನಾನಾರೊ ನಾವು ತಿಳಿದವರಲ್ಲ,
ಅದಾವ ಬಂಧನವೆಂದು ಭಗವಂತನೆ ಬಲ್ಲ;
ಅಂತು ಇಂತು ತಿಳಿಯದ ಕೊಂಡಿ ಹಿಡಿದಿಟ್ಟಾಗ
ವಿಲವಿಲ ವೊದ್ದಾಡುತಲೆ ನಾವು ಕೂಡಿಕೊಂಡೆವಲ್ಲ.
ಹಿಂದುಮುಂದಿನ ಪರಿವೆ ನಮಗಿರಲಿಲ್ಲ ಆಗ,
ಬಳಿಬಳಿಗೆ ಸಾರಿ ಬೆಸುಗೆಗೊಳ್ಳುವುದತ್ತ ಚಿತ್ತ;
ಮೋಡಗಳ ತಿಕ್ಕಾಟದ ಮಧ್ಯೆ ಮಿಂಚು ಬಂದಂತೆ
ಗುಡುಗಿತ್ತಾಗ ಒಳಗೆ ಎಚ್ಚರಿಕೆಯ ಘಂಟಾಘೋಷ.
ನಾನು ನೀನಾದರೋ ಬರೆ ಅಂತಿಂತವರಲ್ಲವಲ್ಲ,
ಅಡೆತಡೆ ಏರುತಗ್ಗು ಮುಳ್ಳುಬೇಲಿಗಳ ತೊಡಕು,
ಸುತ್ತುಮುತ್ತಲ ನೋವುಯಾತನೆಗೆ ಮನನೊಂದು
ನಮ್ಮ ಸುಖಸ್ವಂತಿಕೆಗೆ ಸ್ವತಃ ಎಳ್ಳುನೀರು ಬಿಟ್ಟೆವಲ್ಲ.
ನಿನ್ನನನ್ನ ಬಂಧ ಬರೆ ಇಂದುನಾಳೆಗೆ ಸೀಮಿತವಲ್ಲ,
ಹಲವು ಪದರುಗಳೊಳಗೆ ಹುದುಗಿದ ಜೀವಬಿಂಧು;
ಪರರ ನೋವಿಗೆ ನಾವು ಕಾರಣರಾಗುವುದು ಸಲ್ಲ,
ಕಾಲ ಕೂಡಿದೊಂದು ದಿನ ನಾವು ಕೂಡುವುದು ಸತ್ಯ.
ಅನಂತ ಕಾಲದ ಗೂಢ ಗರ್ಭದಾಳದಾಳದೊಳಗೆ
ನಿನ್ನನನ್ನ ಬಂಧ ಸೂರ್ಯಚಂದ್ರರ ಮೀರಿ ಭದ್ರ;
ಕಾಯಬೇಕು ನಾವು ಕಾಲಗರ್ಭ ಪ್ರಸವಿಸುವವರೆಗೆ,
ಅದೇ ನೋಡು ನಮ್ಮ ಪ್ರೀತಿಯಮೂರ್ತ ಮುಹೂರ್ತ.
ಪ್ರೀತಿಯದುಮಿಟ್ಟು ಈ ಕಾಲ ನೂಕುವುದು ಕಷ್ಟ,
ಕಾಲ ಮೀರಿ ನೋಡಿದರೆ ನಮಗೆ ಇಷ್ಟದ ಮೇಲಿಷ್ಟ;
ಈ ಸವಿ ಕನಸಲ್ಲೇ ನಮ್ಮ ದಿನ ನೂಕಬೇಕು ನಾವು,
ಈ ಭರವಸೆಯ ವಿನಃ ಬಾಳೆಂಬವುದು ಬರೆ ನೋವು.
This poem has not been translated into any other language yet.
I would like to translate this poem