ನೀನು... ಸುಖವಾಗಿದ್ದರೆ ಸಾಕು Poem by Praveen Kumar in Bhavana

ನೀನು... ಸುಖವಾಗಿದ್ದರೆ ಸಾಕು

ನೀನೆಲ್ಲಿದ್ದರು,
ಹೇಗಿದ್ದರು,
ಸುಖವಾಗಿದ್ದರೆ ಸಾಕು;
ನೀನಾರಾಗಿದ್ದರು,
ಯಾಕಾಗಿದ್ದರು,
ನನಗದರ ಪರಿವೆಯಿಲ್ಲ;
ನೀನು.....
ಸುಖವಾಗಿದ್ದರೆ ಸಾಕು.

ನಾವೊಂದಾಗುವುದು
ನಮ್ಮದೃಷ್ಟದಲ್ಲಿಲ್ಲ;
ಮತ್ತೇಕೆ ಹೋರಾಟ,
ಸಲ್ಲದ ಹಾರಾಟ?
ಬಂದದ್ದೆ ಪಂಚಾಮೃತವೆಂದು,
ನೀನು ಇದ್ದುದರಲ್ಲೆ
ಸುಖವಾಗಿದ್ದರೆ ಸಾಕು.

ದೂರದಲ್ಲೆಲ್ಲೋ
ನಿನ್ನ ಬವಣೆ ಪರಿಭಾವಿಸಿ
ತತ್ತರಿಸುತ್ತಿದೆ ಮನಸು;
ದುಗುಡದಿಂದ ದುಡುಕಿ,
ಮತ್ತಾವ ವಿರಕ್ತಿಯಿಂದ
ಗಂಡಾಂತರಕ್ಕೆಳಸುವೆಯೆಂದು
ದಿಗಿಲುಗೊಂಡಿದೆ ಪ್ರಾಣ;
ನನಗೆ ನೀನೆಲ್ಲಿದ್ದರೂ
ಸುಖವಾಗಿದ್ದರೆ ಸಾಕು.

ವಿಧಿಯೆ ಮಧ್ಯೆ ನಿಂತಿರುವಾಗ,
ದಿಕ್ಕೆ ಎದುರುಬದುರಾದಾಗ,
ಮನಸ ಹದ್ದಲ್ಲಿಟ್ಟು,
ತಕ್ಕ ಸಮಯಕ್ಕೆ ಕಾದು
ದಿನ ನೂಕುವುದೆ ಲೇಸು;
ದುಡುಕಿದರೇನು ಬಂತು?
ನೀನು ಇದ್ದಲ್ಲೆ ಇದ್ದು
ಸುಖವಾಗಿದ್ದರೆ ಸಾಕು.

ಈ ನೋವು ಶಾಶ್ವತವಲ್ಲ,
ಲೋಕ ಬದಲಾಗಲೇ ಬೇಕು,
ಇದು ವಿಶ್ವ ನಿಯಮ;
ಸಂಯಮದಿಂದ ಕಾದರೆ
ಬಯಸಿದ್ದು ಬರುವುದೆ
ನಿಯಮ ಸಿದ್ಧ;
ಹೇಗಿದ್ದರೂ ನೀನು
ಸುಖವಿದ್ದರೆ ಸಾಕು.

ನಿನ್ನೆ ನಾಳೆಯ ಪ್ರಶ್ನೆ
ಇಲ್ಲಿಲ್ಲ ಚಿನ್ನ,
ಕಾಲಾತೀತರು ನಾವು;
ಏನೋ ವಿಷಘಳಿಗೆ,
ವಿಧಿ ವಿಜ್ಞಾನವಿದು,
ಎದುರಿಸಲೆ ಬೇಕು;
ಅಂದಿನ ವರೆಗಾದರೂ
ನೀನು ಹೇಗಾದರೂ
ಸುಖವಾಗಿದ್ದರೆ ಸಾಕು.

Sunday, October 22, 2017
Topic(s) of this poem: life,love
COMMENTS OF THE POEM
READ THIS POEM IN OTHER LANGUAGES
Close
Error Success