ನಿರಾಶೆ Poem by PRAVEEN KUMAR Kannada Poems

ನಿರಾಶೆ

ನಾನೆಷ್ಟು ಮೇಲೇರಿದರೂ
ನಿನ್ನ ಕಾಣೆನು ಚಿನ್ನ,
ಕೆಳಗಿಳಿಯುವುದೊಂದೆ
ನನಗಿರುವ ದಾರಿ;
ನಾನೆಷ್ಟು ಬಗೆಯಿಂದ
ನಿನ್ನನ್ನರ್ಥೈಸಿದರೂ,
ವಿಶ್ವಕೋಶ ಕಾಗುಣಿಸಿದರೂ
ನಿನ್ನಸ್ಥಿತ್ವ ತಿಳಿಯಲಿಲ್ಲ;
ಗಾಳಿಗಾಳಿಯ ಒಳಗೆ
ಕೋಣೆಕೋಣೆಯ ಮೂಲೆ
ನೀನಿರುವಿಯೆಂದು
ಒಳಮನ ಸಾರಿದರೂ,
ಭೂತಕನ್ನಡಿ ಹಿಡಿದು
ಎಲ್ಲಕಡೆ ಹುಡುಕಿದರೂ
ನೀನು ಕಾಣಲಿಲ್ಲ;
ಆದರೆ ನೀನಿರುವಿಯೆಂದು
ಚೆನ್ನಾಗಿ ಗೊತ್ತು.

ನೀನೆಲ್ಲ ಕಾಣಬಲ್ಲೆ,
ನೀನೆಲ್ಲ ತಿಳಿಯಬಲ್ಲೆ,
ಇದ್ದೂ ಇಲ್ಲದವಳಾಗಿ
ನನ್ನ ಛೇಡಿಸಬಲ್ಲೆ;
ತೊಳಸೆರೆಯಲ್ಲಿದ್ದೂ,
ಮಡಿಲಲ್ಲೇ ಮಲಗಿದ್ದೂ
ವಿರಹರಾಗ ಹರಿಸಬಲ್ಲೆ;
ಕೈಲಾಗದವನು ನಾನು
ಎಲ್ಲ ತಿಳಿದಿದ್ದೂ,
ನೀನು ಬಳಿಯಲ್ಲಿದ್ದೂ
ನಿನ್ನ ಕಾಣದಾದೆ;
ಕೆಳಗಿಳಿದು ಬಂದು
ನಿನ್ನ ಹಿಡಿಯಲೆಂದು
ಕೈಚಾಚಿ ತಬ್ಬಿದಾಗ,
ಕ್ಷಣಮಾತ್ರ ನನ್ನೊಳಗಿದ್ದು
ನಗುನಗುತ ನೀನು
ಮರೆಯಾದದ್ದೆ ಹೆಚ್ಚು.

ನಮ್ಮೊಳಗೆ ಯಾಕೀ
ಅವಿತು ಹುಡುಕುವ ಆಟ?
ನಮ್ಮೊಳಗೆನೆ ಯಾಕೆ
ವಿಚ್ಚಿನ್ನ ದುರ್ಗಮ ಕೂಟ?
ನೀನೇಕೆ ಪ್ರಕಟಗೊಂಡು,
ದೃಷ್ಟಿಗೋಚರಳಾಗಿ,
ನನ್ನಳವನು ಮಾಚಿ
ನಾವೊಂದಾಗಬಾರದು ಚಿನ್ನ?

ನನ್ನಾಶೆಯು ಅದೆ,
ನಿನ್ನಾಶೆಯು ಅದೆ,
ವಿಧಿಯಾಶೆ ಬೇರೆ ಬೇರೆ;
ಬಳಿಬಳಿಯಿದ್ದೂ,
ಒಬ್ಬರೊಬ್ಬರ ಎದೆಬಡಿತ
ಕ್ಷಣಕ್ಷಣ ತಿಳಿದೂ,
ಬಾಯಿಗೆ ಸಿಗದ ತುಪ್ಪವಾಗಿ,
ಕೈಗೆಟುಕದ ಅಪ್ಪುಗೆಯಾಗಿ
ಕ್ಷಣಕ್ಷಣ ನೋವುಣ್ಣ ಬೇಕು;
ನಾನಾದರೋ ಕುರುಡನಾಗಿ,
ಇದ್ದೂ ಕಾಣದವನಂತೆ
ಎಲ್ಲ ಸಹಿಸಬಹುದು;
ನೀನು ಎಲ್ಲ ಕಾಣುತಿದ್ದು,
ಕಣ್ಣೆದುರೇ ಜೊತೆಜೊತೆಗಿದ್ದು,
ಇದ್ದೂ ಇಲ್ಲದವಳಂತೆ
ನಿನ್ನನ್ನೆ ತಡೆಹಿಡಿದು
ನಿಲ್ಲುವುದು ಅಪರ ಕಷ್ಟ.

ನಿನ್ನ ನೋವಿನ ಆಳ
ನಾನು ಚೆನ್ನಾಗಿ ಬಲ್ಲೆ,
ನಿನ್ನ ಕೈಲಾಗದ ಸ್ಥಿತಿ
ನಾನು ತಿಳಿಯದವನೇನು?
ಒಂದೇ ದೋಣಿಯಲ್ಲಿ ಹಿಡಿದಿಟ್ಟು,
ಮಧ್ಯೆ ಗೋಡೆಯ ಕಟ್ಟಿ
ವಿಧಿ ಕರೆದೊಯ್ಯುತ್ತಿದೆ ಎಲ್ಲೋ,
ಕಣ್ಮುಚ್ಚಿ ನಾವು ಮುಂದೆ ಸಾಗಬೇಕು.

COMMENTS OF THE POEM
READ THIS POEM IN OTHER LANGUAGES
Close
Error Success